ಇಸ್ಲಾಮಾಬಾದ್:ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಭಾರತೀಯ ನಾಗರಿಕ ವಿಮಾನಗಳ ಹಾರಾಟಕ್ಕೆ ಇದ್ದ ನಿರ್ಬಂಧವನ್ನು ಮಂಗಳವಾರ ತೆಗೆದು ಹಾಕಿದೆ.
ಪಾಕಿಸ್ತಾನ ಸರ್ಕಾರದ ಈ ತೀರ್ಮಾನದಿಂದಾಗಿ ಭಾರತೀಯ ವೈಮಾನಿಕ ಉದ್ಯಮಕ್ಕೆ ಅನುಕೂಲವಾದಂತಾಗಿದೆ.ಪುಲ್ವಾಮಾ ದಾಳಿ ಬಳಿಕ ಫೆಬ್ರುವರಿ 26ರಂದು ಭಾರತೀಯ ವಾಯುಪಡೆ ವಿಮಾನಗಳು, ಬಾಲಕೋಟ್ ಪ್ರದೇಶದಲ್ಲಿ ಜೈಶ್ ಎ ಮೊಹಮ್ಮದ್(ಜೆಇಎಂ)ಭಯೋತ್ಪಾದಕರ ಸಂಘಟನೆ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ ನಂತರದಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಸಂಪೂರ್ಣ ತಡೆಯೊಡ್ಡಿತ್ತು.
ಪಾಕಿಸ್ತಾನದ ವಾಯುಪ್ರದೇಶ ನಿರ್ಬಂಧದ ಬಳಿಕ ಭಾರತದಿಂದ ಹೊರಡುವ ಎಲ್ಲ ವಿಮಾನಗಳ ಮಾರ್ಗ ಬದಲಾಯಿಸಲಾಗಿತ್ತು. ಇದರಿಂದಾಗಿ ವೈಮಾನಿಕ ಉದ್ಯಮ ನಷ್ಟ ಅನುಭವಿಸುತ್ತಿತ್ತು. ಏರ್ ಇಂಡಿಯಾ ಒಂದಕ್ಕೇ ಅಂದಾಜು ₹491 ಕೋಟಿ ಹೆಚ್ಚುವರಿ ಹೊರೆಯಾಗುತ್ತಿತ್ತು ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು.
ಮಂಗಳವಾರ ಬೆಳಗ್ಗೆ 12.41ರಿಂದ ತನ್ನ ವಾಯುಪ್ರದೇಶದ ಮೂಲಕ ಎಲ್ಲಾ ರೀತಿಯ ನಾಗರಿಕ ವಿಮಾನಗಳ ಹಾರಾಟ ನಡೆಸಬಹುದು ಎಂದು ಪಾಕಿಸ್ತಾನ ವಿಮಾನಯಾಣ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ನಾಗರಿಕ ವಿಮಾನಗಳ ಹಾರಾಟಕ್ಕೆವಾಯುಪ್ರದೇಶ ನಿರ್ಬಂಧ ತೆರವು ಮಾಡುವಂತೆ ಭಾರತ ಸರ್ಕಾರ ಪಾಕಿಸ್ತಾನವನ್ನು ಕೇಳಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.