ರೇಖಾ ಗುಪ್ತಾ
(ಪಿಟಿಐ ಚಿತ್ರ)
ನವದೆಹಲಿ: ದೆಹಲಿ ಸರ್ಕಾರವು ಆಡಳಿತಾತ್ಮಕ ಕಾರಣಗಳಿಂದಾಗಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸದ ನವೀಕರಣದ ಟೆಂಡರ್ ಅನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ರೇಖಾ ಗುಪ್ತಾ ಅವರ ಅಧಿಕೃತ ನಿವಾಸವಾದ ರಾಜ್ ನಿವಾಸ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 1ರ ನವೀಕರಣ ನಡೆಯಲಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಈಚೆಗೆ ಟೆಂಡರ್ ಕರೆದಿತ್ತು.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಅಧಿಕೃತ ನಿವಾಸವಾದ ರಾಜ್ ನಿವಾಸ ಮಾರ್ಗದಲ್ಲಿರುವ ಬಂಗಲೆ ಸಂಖ್ಯೆ 1ರ ನವೀಕರಣ ಇದೇ ತಿಂಗಳು ನಡೆಯಲಿದ್ದು, ಇದಕ್ಕಾಗಿ ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದಿದೆ.
ನವೀಕರಣದಲ್ಲಿ ವಿದ್ಯುತ್ ಉಪಕರಣಗಳ ಬದಲಾವಣೆ ಮುಖ್ಯವಾಗಿ ಇರಲಿದೆ. ಇದಕ್ಕೆ ಜುಲೈ 4ರಂದು ಬಿಡ್ ಆರಂಭವಾಗಲಿದ್ದು, ಟೆಂಡರ್ ಘೋಷಣೆಯಾಗುತ್ತಿದ್ದಂತೆ 60 ದಿನಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಮುಖ್ಯಮಂತ್ರಿ ರೇಖಾ ಅವರಿಗೆ ಎರಡು ಬಂಗಲೆಗಳು ಮಂಜೂರಾಗಿವೆ. ಇದರಲ್ಲಿ ಬಂಗಲೆ ಸಂಖ್ಯೆ 1ರಲ್ಲಿ ಅವರು ಉಳಿಯಲಿದ್ದಾರೆ. ಆದರೆ ಬಂಗಲೆ ಸಂಖ್ಯೆ 2 ಅನ್ನು ಅವರು ಗೃಹ ಕಚೇರಿಯಾಗಿ ಬಳಸಿಕೊಳ್ಳಲಿದ್ದಾರೆ ಎಂದೆನ್ನಲಾಗಿದೆ.
ಜೂನ್ 28ರಂದು ಟೆಂಡರ್ ಕರೆಯಲಾಗಿತ್ತು. ಒಟ್ಟು ₹60 ಲಕ್ಷದ ಈ ಟೆಂಡರ್‌ನಲ್ಲಿ ₹9.3 ಲಕ್ಷದ ಐದು ಟಿ.ವಿ.ಗಳನ್ನು ಅಳವಡಿಸಬೇಕಿದೆ. ₹7.7 ಲಕ್ಷದಲ್ಲಿ 14 ಹವಾನಿಯಂತ್ರಿತ ಸಾಧನಗಳು, ₹5.74 ಲಕ್ಷದ 14 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಿದೆ. ₹2ಲಕ್ಷ ಮೌಲ್ಯದ ಯುಪಿಎಸ್ ಅಳವಡಿಸಬೇಕು ಎಂದೂ ಹೇಳಲಾಗಿದೆ.
ಇದಲ್ಲದೇ, ರಿಮೋಟ್ ಇರುವ 23 ಫ್ಯಾನ್‌ಗಳಿಗೆ ₹1.8 ಲಕ್ಷ, ಟೋಸ್ಟ್ ತಯಾರಿಸುವ ಗ್ರಿಲ್ (₹85 ಸಾವಿರ), ಆಟೊಮ್ಯಾಟಿಕ್ ವಾಷಿಂಗ್ ಮಷಿನ್ (₹77 ಸಾವಿರ), ಪಾತ್ರೆ ತೊಳೆಯುವ ಯಂತ್ರ (₹60 ಸಾವಿರ); ಅಡುಗೆ ಅನಿಲ ಒಲೆ (₹63 ಸಾವಿರ), ಮೈಕ್ರೊವೇವ್ ಅವನ್ ₹32ಸಾವಿರ ಮತ್ತು ಆರು ಗೀಸರ್ (₹91 ಸಾವಿರ) ಅಳವಡಿಸಬೇಕು ಎಂದು ಹೇಳಲಾಗಿದೆ.
ಒಟ್ಟು 115 ದೀಪಗಳನ್ನು ಅಳವಡಿಸಬೇಕಿದೆ. ಇದರಲ್ಲಿ ಗೋಡೆಗೆ ಅಳವಡಿಸುವ, ತೂಗುಹಾಕುವ ದೀಪಗಳು ಮತ್ತು ಮೂರು ದೊಡ್ಡ ಝೂಮರ್‌ಗಳನ್ನು ಅಳವಡಿಸಬೇಕಿದೆ. ಇದಕ್ಕಾಗಿ ₹6.03 ಲಕ್ಷವನ್ನು ಇಲಾಖೆ ಮೀಸಲಿಟ್ಟಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.