ADVERTISEMENT

15 – 18 ವರ್ಷದವರು ವಿದ್ಯಾರ್ಥಿ ಗುರುತು ಚೀಟಿ ಬಳಸಿ ಕೋ–ವಿನ್‌ ನೋಂದಣಿ ಮಾಡಬಹುದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2021, 10:28 IST
Last Updated 27 ಡಿಸೆಂಬರ್ 2021, 10:28 IST
ಸಾಂದರ್ಭಿಕ ಚಿತ್ರ – ರಾಯಿಟರ್ಸ್
ಸಾಂದರ್ಭಿಕ ಚಿತ್ರ – ರಾಯಿಟರ್ಸ್   

ನವದೆಹಲಿ: ಕೋವಿಡ್–19 ಲಸಿಕಾ ಅಭಿಯಾನವನ್ನು ಜನವರಿಯಿಂದ 15ರಿಂದ 18 ವರ್ಷ ವಯಸ್ಸಿನವರಿಗೂ ವಿಸ್ತರಿಸಲಾಗುತ್ತಿದೆ. ಹೀಗಾಗಿ ಈ ವಯಸ್ಸಿವರು ಲಸಿಕೆ ಪಡೆಯಲು ವಿದ್ಯಾರ್ಥಿ ಗುರುತಿನ ಚೀಟಿಯನ್ನು ಬಳಸಿಕೊಂಡು ಕೋ–ವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಬಹುದಾಗಿದೆ.

ವಿದ್ಯಾರ್ಥಿ ಗುರುತಿನ ಚೀಟಿಯನ್ನು ಪರಿಗಣಿಸಲು ಬೇಕಾದ ಬದಲಾವಣೆಗಳನ್ನು ಕೋ–ವಿನ್‌ ಪೋರ್ಟಲ್‌ನಲ್ಲಿ ಮಾಡಲಾಗುತ್ತಿದೆ ಎಂದು ಮೂಲಗಳ ಹೇಳಿಕೆ ಉಲ್ಲೇಖಿಸಿ ‘ಎಎನ್‌ಐ’ ವರದಿ ಮಾಡಿದೆ.

‘15ರಿಂದ 18 ವರ್ಷ ವಯಸ್ಸಿನವರು ಜನವರಿ 1ರಿಂದ ಕೋ–ವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಬಹುದಾಗಿದೆ. ಕೆಲವರಲ್ಲಿ ಆಧಾರ್ ಅಥವಾ ಇತರ ಗುರುತಿನ ಚೀಟಿಗಳು ಇಲ್ಲದಿರುವ ಸಾಧ್ಯತೆ ಇದೆ. ಹೀಗಾಗಿ 10ನೇ ತರಗತಿಯ ಹಾಗೂ ವಿದ್ಯಾರ್ಥಿ ಗುರುತಿನ ಚೀಟಿ ಮೂಲಕವೂ ನೋಂದಣಿಗೆ ಅನುವು ಮಾಡಿಕೊಡುತ್ತಿದ್ದೇವೆ’ ಎಂದು ಕೋ–ವಿನ್‌ ಪೋರ್ಟಲ್‌ ಮುಖಸ್ಥ ಡಾ. ಆರ್‌.ಎಸ್. ಶರ್ಮಾ ತಿಳಿಸಿದ್ದಾರೆ.

ಜನವರಿ 3ರಿಂದ 15ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಿಕೆ ಆರಂಭಿಸಲಾಗುತ್ತದೆ. ಈ ವಯೋಮಾನದವರಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.