ADVERTISEMENT

ಹಳಿ ತಪ್ಪಿದ ಕಣ್ಣೂರು–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು: ಪ್ರಯಾಣಿಕರು ಸುರಕ್ಷಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ನವೆಂಬರ್ 2021, 7:28 IST
Last Updated 12 ನವೆಂಬರ್ 2021, 7:28 IST
ಚಿತ್ರ ಕೃಪೆ – ನೈಋತ್ಯ ರೈಲ್ವೆ
ಚಿತ್ರ ಕೃಪೆ – ನೈಋತ್ಯ ರೈಲ್ವೆ   

ಬೆಂಗಳೂರು: ಕಣ್ಣೂರು–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನ ಐದು ಬೋಗಿಗಳು ಶುಕ್ರವಾರ ಮುಂಜಾನೆ ಹಳಿ ತಪ್ಪಿವೆ.

ಬೆಂಗಳೂರು ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ತೊಪ್ಪೂರು–ಸಿವಾಡಿ ಮಧ್ಯೆ ಬಂಡೆಗಳು ಉರುಳಿಬಿದ್ದ ಪರಿಣಾಮ ರೈಲು ಹಳಿ ತಪ್ಪಿದೆ. ಮುಂಜಾನೆ 3.50ರ ಸುಮಾರಿಗೆ ರೈಲುಸಂಚರಿಸುತ್ತಿದ್ದಾಗಲೇ ರೈಲಿನ ಮೇಲೆ ಬಂಡೆಗಳು ಉರುಳಿದ್ದು, ರೈಲುಹಳಿ ತಪ್ಪಿದೆ.ಎಲ್ಲ 2,348 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ಹೇಳಿಕೆ ಉಲ್ಲೇಖಿಸಿ ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ರೈಲು ಸಂಖ್ಯೆ 07390 ಕಣ್ಣೂರು–ಬೆಂಗಳೂರು ಎಕ್ಸ್‌ಪ್ರೆಸ್‌ ಗುರುವಾರ ಸಂಜೆ ಕಣ್ಣೂರಿನಿಂದ ಪ್ರಯಾಣ ಬೆಳೆಸಿತ್ತು.

ADVERTISEMENT

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಅವರು ವೈದ್ಯರು, ವೈದ್ಯಕೀಯ ಪರಿಕರಗಳ ವಾಹನ ಸೇರಿದಂತೆ ಅಧಿಕಾರಿಗಳ ತಂಡದ ಜತೆ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಸುಸ್ಥಿತಿಯಲ್ಲಿರುವಬೋಗಿಗಳನ್ನು ಪ್ರಯಾಣಿಕರ ಸಹಿತ ತೊಪ್ಪೂರು ಮತ್ತು ಸೇಲಂ ಕಡೆಗೆ ಕಳುಹಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಘಟನಾ ಸ್ಥಳಕ್ಕೆ ತೊಪ್ಪೂರಿನಿಂದ ಐದು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರಿಗೆ ನೀರು ಮತ್ತು ಲಘು ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲ್ವೆ ಇಲಾಖೆಯು ಸಹಾಯವಾಣಿ ಸಂಖ್ಯೆಗಳನ್ನೂ ಆರಂಭಿಸಿದ್ದು, ಹೊಸೂರಿಗೆ 04344-222603, ಬೆಂಗಳೂರಿಗೆ 080-22156554, ಧರ್ಮಪುರಿಗೆ 04342-232111 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು,ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.