
ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
–ಪಿಟಿಐ ಚಿತ್ರ
ಕಾಲೇಜು ವಿದ್ಯಾರ್ಥಿನಿಯ ಎಳೆದೊಯ್ದು ಸಾಮೂಹಿಕ ಅತ್ಯಾಚಾರ | ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು ಗುಂಡಿನ ದಾಳಿ ನಡೆಸಿ, ಆರೋಪಿಗಳ ಬಂಧನ
ಕೊಯಮತ್ತೂರು (ತಮಿಳುನಾಡು): ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಮೂವರು ಆರೋಪಿಗಳ ಮೇಲೆ ತಮಿಳುನಾಡು ಪೊಲೀಸರು ಗುಂಡಿನ ದಾಳಿ ನಡೆಸಿ, ಬಂಧಿಸಿದ್ದಾರೆ.
‘ಸೋಮವಾರ ರಾತ್ರಿ ವೇಳೆ ಆರೋಪಿಗಳ ಶೋಧ ನಡೆಸುತ್ತಿದ್ದ ವೇಳೆ ವಿರುಧುನಗರದ ಸತೀಶ್ ಅಲಿಯಾಸ್ ಕರುಪ್ಪುಸ್ವಾಮಿ (30), ಆತನ ಸಹೋದರ ಕಾರ್ತಿ ಅಲಿಯಾಸ್ ಕಾಳೇಶ್ವರಂ (21), ಮದುರೈ ಜಿಲ್ಲೆಯ ಈತನ ಸಂಬಂಧಿ ಗುಣ ಅಲಿಯಾಸ್ ಥವಾಸಿಯು (20) ಪೊಲೀಸರ ಮೇಲೆ ಹಲ್ಲೆ ನಡೆಸಿದರು. ತಕ್ಷಣವೇ ಅವರ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎ.ಸರವಣ ಸುಂದರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
‘ಯುವತಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯವೂ ಅಮಾನವೀಯವಾದುದು. ಇಂತಹ ಘೋರ ಅಪರಾಧಗಳನ್ನು ಖಂಡಿಸಲು ಪದಗಳೇ ಸಾಕಾಗುವುದಿಲ್ಲ. ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ, ಬಂಧನಕ್ಕೆ ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅನುಕೂಲವಾಗುವಂತೆ, ತಿಂಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರು ‘ಎಕ್ಸ್’ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ: ‘ಪ್ರಕರಣ ನಡೆದ ತಕ್ಷಣ ಕಾರ್ಯಾಚರಣೆ ನಡೆಸಿದ ತನಿಖಾಧಿಕಾರಿಗಳು 300ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಗಳ ಪರಿಶೀಲನೆ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿಗಳು ಸೋಮವಾರ ರಾತ್ರಿ 10.40ರ ವೇಳೆ ವೆಲ್ಲಕಿನಾರು ಪ್ರದೇಶದಲ್ಲಿರುವುದನ್ನು ಪತ್ತೆಹಚ್ಚಿದ್ದರು. ಸ್ಥಳಕ್ಕೆ ತೆರಳಿದ್ದ ವೇಳೆ ಮೂವರು ಒಟ್ಟಾಗಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಆಗ ಅವರ ಮೊಣಕಾಲುಗಳ ಕೆಳಗೆ ಗುಂಡು ಹಾರಿಸಿ ಬಂಧಿಸಲಾಯಿತು’ ಎಂದು ಸರವಣ ಸುಂದರ್ ಮಾಹಿತಿ ನೀಡಿದ್ದಾರೆ.
‘ಕಾರ್ಯಾಚರಣೆ ವೇಳೆ ಕಾನ್‌ಸ್ಟೆಬಲ್ ಒಬ್ಬರು ಗಾಯಗೊಂಡಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ, ಕಳ್ಳತನದ ಆರೋಪಗಳಡಿ ಪ್ರಕರಣಗಳು ದಾಖಲಾಗಿವೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
‘ನವೆಂಬರ್ 2ರಂದು ಮೂವರೂ ಸೇರಿಕೊಂಡು ದ್ವಿಚಕ್ರ ವಾಹನವನ್ನು ಕದ್ದೊಯ್ದು, ವಿಮಾನ ನಿಲ್ದಾಣ ಸಮೀಪದ ಮಣ್ಣಿನ ರಸ್ತೆಯಲ್ಲಿ ತೆರಳುತ್ತಿದ್ದದರು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತನ ಜೊತೆ ಕಾರಿನಲ್ಲಿ ಕುಳಿತು ಮಾತನಾಡುತ್ತಿರುವುದನ್ನು ಗಮನಿಸಿದ್ದಾರೆ. ಅಲ್ಲಿಗೆ ತೆರಳಿದ ಮೂವರು, ಕಲ್ಲಿನಿಂದ ಕಾರಿನ ಗಾಜು ಒಡೆದುಹಾಕಿ, ಸ್ನೇಹಿತನ ಮೇಲೆ ದಾಳಿ ನಡೆಸಿ, ವಿದ್ಯಾರ್ಥಿನಿಯನ್ನು ಕತ್ತಲಿದ್ದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಸ್ನೇಹಿತ ತಕ್ಷಣವೇ ಎಸ್‌ಒಸ್ ಮುಖಾಂತರ ಪೊಲೀಸ್ ನಿಯಂತ್ರಣ ಕೊಠಡಿಗೆ 11.20ಕ್ಕೆ ಮಾಹಿತಿ ನೀಡಿದ್ದಾರೆ. ಇದಾದ 15 ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ, ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿನಿಯು ಅಪಾಯದಿಂದ ಪಾರಾಗಿದ್ದಾರೆ’ ಎಂದು ಸರವಣ ವಿವರ ನೀಡಿದ್ದಾರೆ.
‘ಸಂತ್ರಸ್ತೆಗೆ ಕೌನ್ಸೆಲಿಂಗ್ ನೀಡಲಾಗಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.
‘ಆರೋಪಿಗಳ ಪೈಕಿ ಒಬ್ಬನಿಗೆ ಒಂದು ಕಾಲಿಗೆ ಗಾಯವಾಗಿದ್ದು, ಮತ್ತಿಬ್ಬರಿಗೆ ಎರಡು ಕಾಲಿಗೆ ಗಾಯಗಳಾಗಿವೆ. ಮೂವರನ್ನೂ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ವಿವರಿಸಿದ್ದಾರೆ.
ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಈ ಸಂದರ್ಭದಲ್ಲಿ ಪ‍್ರಾಣಿಗಳಿಗಿಂತಲೂ ಹೀನಾಯವಾಗಿ ವಿಕೃತಿ ಮೆರೆಯುತ್ತಿರುವ ಸ್ಥಿತಿಯೂ ಕೊನೆಯಾಗಬೇಕು. ನಮ್ಮ ಸಂಪೂರ್ಣ ಪರಿವರ್ತನೆಯು ಪ್ರಗತಿಪರ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿ ತಮಿಳುನಾಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.