ADVERTISEMENT

ಮಕ್ಕಳ ಸರಣಿ ಸಾವು: ಕೆಮ್ಮಿನ ಸಿರಪ್‌ ಕೋಲ್ಡ್‌ರಿಫ್‌ ತಯಾರಕ ರಂಗನಾಥನ್‌ ಬಂಧನ

ಪಿಟಿಐ
Published 9 ಅಕ್ಟೋಬರ್ 2025, 6:47 IST
Last Updated 9 ಅಕ್ಟೋಬರ್ 2025, 6:47 IST
<div class="paragraphs"><p>ಬಂಧನ </p></div>

ಬಂಧನ

   

ಛಿಂದ್ವಾರ: ಮಕ್ಕಳ ಸರಣಿ ಸಾವಿಗೆ ಕಾರಣವಾದ ಕೋಲ್ಡ್‌ರಿಫ್‌ ಕೆಮ್ಮಿನ ಸಿರಪ್ ತಯಾರಿಸುವ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್‌ ಕಾರ್ಖಾನೆ ಮಾಲೀಕ ಎಸ್‌.ರಂಗನಾಥನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್‌ (ಡಿಇಜಿ)  ಮತ್ತು ಎಥಿಲಿನ್ ಗ್ಲೈಕಾಲ್‌ (ಇಜಿ) ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿವೆ. ಮಧ್ಯಪ್ರದೇಶದಲ್ಲಿ ಐದು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ರಾಜಸ್ಥಾನದಲ್ಲಿ ಮೂವರು ಮಕ್ಕಳು ಅಸುನೀಗಿದ್ದು, ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮಧ್ಯಪ್ರದೇಶ ಪೊಲೀಸರು, ಚೆನ್ನೈ ಪೊಲೀಸರ ನೆರವಿನೊಂದಿಗೆ ರಂಗನಾಥನ್ ಅವರನ್ನು ಗುರುವಾರ ಬಂಧಿಸಿದ್ದಾರೆ. ಎರಡೂ ರಾಜ್ಯಗಳ ಪೊಲೀಸರು ಜಾಲ ಬೀಸಿದ್ದರು. ಗುರುವಾರ ನಸುಕಿನಲ್ಲಿ ರಂಗನಾಥನ್‌ ಅವರನ್ನು ಬಂಧಿಸಲಾಯಿತು. ನಂತರ ಸುಂಗುವರಚತ್ರಂ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಪ್ರಕರಣ ದಾಖಲಾದ ನಂತರ ಅ. 7ರಿಂದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಚಾಂಚೀಪುರಂನಲ್ಲಿರುವ ತಯಾರಿಕಾ ಘಟಕದಿಂದ ದಾಖಲೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಪೊಲೀಸ್ ವಶದಲ್ಲಿರುವ ರಂಗನಾಥನ್‌ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಛಿಂದ್ವಾರಕ್ಕೆ ಸ್ಥಳಾಂತರಿಸಲು ಪೊಲೀಸರು ಅನುಮತಿ ಕೋರಲಿದ್ದಾರೆ ಎಂದು ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಘಟನೆ ಸಂಭವಿಸಿದ ಬೆನ್ನಲ್ಲೇ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್‌ ಕಾರ್ಖಾನೆಗೆ ತಮಿಳುನಾಡು ಸರ್ಕಾರ ಬೀಗ ಹಾಕಿತು. ಕಂಪನಿಯ ಇಬ್ಬರಿಗೆ ಶೋಕಾಸ್‌ ನೋಟಿಸ್‌ ನೀಡಿತ್ತು. ಚೆನ್ನೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ, ಕಾಂಚಿಪುರಂ ಜಿಲ್ಲೆಯ ಸುಂಗುವರಚತ್ರಂನಲ್ಲಿರುವ ಕಂಪನಿಯ ಕಾರ್ಖಾನೆಗೆ ಮಂಗಳವಾರ ಸಂಜೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.

ವಿಷ ದ್ರಾವಣವಿರುವ ಸಿರಪ್‌ ಸೇವಿಸಿದ್ದರಿಂದ ಸಂಭವಿಸಿರುವ ಮಕ್ಕಳ ಸರಣಿ ಸಾವಿನ ಹಿನ್ನೆಲೆಯಲ್ಲಿ, ಮಾರುಕಟ್ಟೆಗೆ ಯಾವುದೇ ಔಷಧ ಬಿಡುಗಡೆಗೂ ಮುನ್ನ ಅವುಗಳಲ್ಲಿರುವ ಕಚ್ಚಾ ಸಾಮಗ್ರಿಗಳ ಪರೀಕ್ಷೆ ನಡೆಸಿ, ಅವುಗಳು ಸುರಕ್ಷಿತ ಎಂದು ಖಾತ್ರಿಯಾದ ನಂತರವೇ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಭಾರತೀಯ ಔಷಧ ನಿಯಂತ್ರಕ (DCGI) ಮಾರ್ಗಸೂಚಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.