ADVERTISEMENT

ಕೆಮ್ಮಿನ ಸಿರಪ್‌ ಸೇವಿಸಿದ್ದ ಮಕ್ಕಳ ಸಾವು| ನಿಯಮ ಪಾಲನೆ: ಟಿಎನ್‌ಎಫ್‌ಡಿಎದಿಂದ ಲೋಪ

ಪಿಟಿಐ
Published 11 ಅಕ್ಟೋಬರ್ 2025, 10:31 IST
Last Updated 11 ಅಕ್ಟೋಬರ್ 2025, 10:31 IST
<div class="paragraphs"><p>ಕೆಮ್ಮಿನ ಸಿರಪ್‌</p></div>

ಕೆಮ್ಮಿನ ಸಿರಪ್‌

   

ಪಿಟಿಐ ಚಿತ್ರ

ನವದೆಹಲಿ: ಔಷಧೀಯ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಮೂಲಭೂತ ನಿಯಮಗಳನ್ನು ತಮಿಳುನಾಡು ಆಹಾರ ಮತ್ತು ಔಷಧ ಆಡಳಿತ (ಟಿಎನ್‌ಎಫ್‌ಡಿಎ) ಇಲಾಖೆ ಪಾಲನೆ ಮಾಡದೇ ಇರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಮೂಲಗಳು ಹೇಳಿವೆ.

ADVERTISEMENT

‘ಕೋಲ್ಡ್ರಿಫ್‌’ ಕೆಮ್ಮಿನ ಸಿರಪ್‌ ಸೇವಿಸಿದ ನಂತರ ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಂಡ ಕಾರಣ ಮಧ್ಯಪ್ರದೇಶದಲ್ಲಿ 22 ಮಕ್ಕಳು ಮೃತಪಟ್ಟಿವೆ ಎಂಬ ಆರೋಪಗಳಿವೆ. ಇದರ ಬೆನ್ನಲ್ಲೇ, ಸಿರಪ್‌ ತಯಾರಕ ಕಂಪನಿ ತಮಿಳುನಾಡಿನ ಕಾಂಚಿಪುರ ಜಿಲ್ಲೆಯ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ ವಿರುದ್ಧ ಕೈಗೊಂಡ ತನಿಖೆ ವೇಳೆ ಈ ಸಂಗತಿ ಗೊತ್ತಾಗಿದೆ ಎಂದು ಇವೇ ಮೂಲಗಳು ಹೇಳಿವೆ.

ಕರ್ತವ್ಯದಲ್ಲಿ ಆಗಿರುವ ಈ ಲೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಕಂಪನಿಯ ಅಧಿಕಾರಿಗಳು ಲಭ್ಯರಾಗಲಿಲ್ಲ ಎಂದು ಪಿಟಿಐ ತಿಳಿಸಿದೆ.

ಸ್ರೇಸನ್‌ ಫಾರ್ಮಾ ಮಾಲೀಕನನ್ನು ಮಧ್ಯಪ್ರದೇಶ ಪೊಲೀಸರು ಅಕ್ಟೋಬರ್ 8ರಂದು ಬಂಧಿಸಿದ್ದಾರೆ. ಕೆಮ್ಮಿನ ಸಿರಪ್ ತಯಾರಿಕೆಯಲ್ಲಿ ಆಗಿರುವ ಲೋಪಕ್ಕೆ ಸಂಬಂಧಿಸಿ ತಮಿಳುನಾಡು ಸರ್ಕಾರವು ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ಹೇಳಿವೆ.

ತನಿಖೆ: ಪತ್ತೆಯಾದ ಲೋಪಗಳು

  • ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ಗೆ 2011ರಲ್ಲಿ ಕೆಮ್ಮಿನ ಸಿರಪ್‌ ತಯಾರಿಕೆಗೆ ಟಿಎನ್‌ಎಫ್‌ಡಿಎ ಪರವಾನಗಿ ನೀಡಿದೆ. ಕಂಪನಿಯು ಸಿರಪ್‌ ತಯಾರಿಕೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿದೆಯೇ ಎಂಬ ಬಗ್ಗೆ ಟಿಎನ್‌ಎಫ್‌ಡಿಎ ದಶಕಗಳ ಕಾಲ ಪರಿಶೀಲನೆ ನಡೆಸಿಲ್ಲ

  • ರಾಷ್ಟ್ರೀಯ ಔಷಧ ಸುರಕ್ಷತಾ ನಿಯಮಗಳನ್ನು ಕಂಪನಿ ಪದೇಪದೇ ಉಲ್ಲಂಘನೆ ಮಾಡಿದೆ * ಔಷಧೀಯ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ವಿಧಾನಗಳನ್ನು (ಜಿಎಂಪಿ) ಕಂಪನಿ ಅನುಸರಿಸಿಲ್ಲ ಹಾಗೂ ಕಾರ್ಖಾನೆಯ ಸ್ಥಿತಿ ಗಾಬರಿ ಮೂಡಿಸುವ ರೀತಿ ಇರುವುದು ಇತ್ತೀಚಿನ ತನಿಖೆ ವೇಳೆ ಕಂಡುಬಂದಿದೆ

  • ಸಿಡಿಎಸ್‌ಸಿಒ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ ಕುರಿತು ಟಿಎನ್‌ಎಫ್‌ಡಿಎ ನಡೆಸಿರುವ ತಪಾಸಣೆ ಪ್ರಕ್ರಿಯೆಯ ಭಾಗವಾಗಿರಲಿಲ್ಲ. ಕಂಪನಿಯಿಂದಾದ ನಿಯಮಗಳ ಉಲ್ಲಂಘನೆ ಹಾಗೂ ಅದು ಹೊಂದಿರುವ ಕಳಪೆ ಮೂಲಸೌಕರ್ಯಗಳ ಕುರಿತು ಸಿಡಿಎಸ್‌ಸಿಒಗೆ ಟಿಎನ್‌ಎಫ್‌ಡಿಎ ಮಾಹಿತಿ ನೀಡಿರಲಿಲ್ಲ. ಇದೇ ಕಾರಣಕ್ಕೆ ಸಿಡಿಎಸ್‌ಸಿಒ ದತ್ತಾಂಶಗಳಲ್ಲಿ ಸ್ರೇಸನ್‌ ಫಾರ್ಮಾಸ್ಯುಟಿಕಲ್ಸ್‌ ಕುರಿತು ಯಾವುದೇ ಮಾಹಿತಿ ಇಲ್ಲ

  • ನಿಯಮಗಳ ಪ್ರಕಾರ ಅನುಮೋದನೆ ಪಡೆಯಲಾದ ತಮ್ಮ ಉತ್ಪನ್ನಗಳ ಕುರಿತು ಔಷಧ ತಯಾರಿಸುವ ಕಂಪನಿಗಳು ‘ಸುಗಮ’ ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಮಾಡುವುದು ಕಡ್ಡಾಯ. ಸ್ರೇಸನ್‌ ಫಾರ್ಮಾ ತನ್ನ ಉತ್ಪನ್ನಗಳ ಕುರಿತು ಈ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಡೇಟ್ ಮಾಡಿರಲಿಲ್ಲ

  • ಔಷಧ ತಯಾರಕ ಕಂಪನಿಗಳ ಕುರಿತು ಕೇಂದ್ರೀಕೃತ ದತ್ತಾಂಶ ಸಿದ್ಧಪಡಿಸಲಾಗುತ್ತಿದ್ದು ಮಾಹಿತಿ ಒದಗಿಸುವಂತೆ ಟಿಎನ್‌ಎಫ್‌ಡಿಎ ಹಾಗೂ ಎಲ್ಲ ತಯಾರಕರಿಗೆ 2023ರ ಅಕ್ಟೋಬರ್‌ನಲ್ಲಿ ಸೂಚಿಸಲಾಗಿತ್ತು. ನಂತರ ಪ್ರತಿ ತಿಂಗಳು ನಡೆಯುವ ಪರಿಶೀಲನಾ ಸಭೆಯಲ್ಲಿಯೂ ಜ್ಞಾಪಿಸಲಾಗಿತ್ತು. ಆದರೆ ಸ್ರೇಸನ್‌ ಫಾರ್ಮಾ ಆಗಲಿ ಅಥವಾ ಟಿಎನ್‌ಎಫ್‌ಡಿಎ ಆಗಲಿ ಮಾಹಿತಿ ಒದಗಿಸಿಲ್ಲ

ಔಷಧ ತಯಾರಿಕರ ಪಟ್ಟಿಗೆ ಸೇರಿದ ಸ್ರೇಸನ್

ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ಕೇಂದ್ರೀಕೃತ ದತ್ತಾಂಶದಲ್ಲಿ ದಾಖಲಾಗಿರುವ ಎಲ್ಲಾ ತಯಾರಕರಿಗೂ ಮತ್ತು ತಮಿಳುನಾಡಿನ ಔಷಧ ನಿಯಂತ್ರಕರಿಗೂ 2023ರ ಅಕ್ಟೋಬರ್‌ನಲ್ಲಿ ಗೂಗಲ್‌ ಶೀಟ್‌ನಲ್ಲಿ ತಮ್ಮ ದಾಖಲೆ ಸೇರಿಸಲು ಕೋರಲಾಗಿತ್ತು. ಇದರ ಆಧಾರದಲ್ಲಿ ಪ್ರತಿ ತಿಂಗಳು ಸಭೆಗಳು ನಡೆಯುತ್ತಿದ್ದವು. ಆದರೆ ಸ್ರೇಸನ್ ಫಾರ್ಮಾ ಹೆಸರು ನೋಂದಣಿ ಆಗಿಲ್ಲ. TNFDA ಕೂಡಾ ಕಂಪನಿಯನ್ನು ಈ ಗುಂಪಿಗೆ ಸೇರಿಸಿಲ್ಲ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ’ ಎಂದು ಮೂಲಗಳು ಹೇಳಿವೆ.

ಅ. 1 ಹಾಗೂ ಅ. 2ರಂದು ಸ್ರೇಸನ್ ಫಾರ್ಮಾ ಕಂಪನಿಯಲ್ಲಿ TNFDA ಲೆಕ್ಕಪರಿಶೋಧನೆ ನಡೆಸಿದೆ. ಆದರೆ ಇದನ್ನು CDSCO ಕೇಂದ್ರ ಕಚೇರಿಗಾಗಲೀ ಅಥವಾ ಪ್ರಾದೇಶಿಕ ಕಚೇರಿಗೆ ಮಾಹಿತಿ ನೀಡಿಲ್ಲ. ಅ. 3ರಂದು CDSCO ತಂಡವು ಅಪಾಯ ಆಧಾರಿತ ತಪಾಸಣೆ ತಂಡದೊಂದಿಗೆ ಶ್ರೇಸನ್‌ ಫಾರ್ಮಾಗೆ ತೆರಳಿತ್ತು. ಇದರಲ್ಲಿ ಪಾಲ್ಗೊಳ್ಳುವಂತೆ ತಮಿಳುನಾಡಿನ ಔಷಧ ನಿಯಂತ್ರಿಕ ವಿಭಾಗದ ಇನ್‌ಸ್ಪೆಕ್ಟರ್‌ಗೆ ಹಲವು ಬಾರಿ ಕೋರಲಾಗಿತ್ತು. ಆದರೆ ಅವರು ಬರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್‌ (ಡಿಇಜಿ)  ಮತ್ತು ಇಥಲಿನ್ ಗ್ಲೈಕಾಲ್‌ (ಇಜಿ) ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿವೆ. ಮಧ್ಯಪ್ರದೇಶದಲ್ಲಿ ಐದು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ರಾಜಸ್ಥಾನದಲ್ಲಿ ಮೂವರು ಮಕ್ಕಳು ಅಸುನೀಗಿದ್ದು, ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.

ವಿಷ ದ್ರಾವಣವಿರುವ ಸಿರಪ್‌ ಸೇವಿಸಿದ್ದರಿಂದ ಸಂಭವಿಸಿರುವ ಮಕ್ಕಳ ಸರಣಿ ಸಾವಿನ ಹಿನ್ನೆಲೆಯಲ್ಲಿ, ಮಾರುಕಟ್ಟೆಗೆ ಯಾವುದೇ ಔಷಧ ಬಿಡುಗಡೆಗೂ ಮುನ್ನ ಅವುಗಳಲ್ಲಿರುವ ಕಚ್ಚಾ ಸಾಮಗ್ರಿಗಳ ಪರೀಕ್ಷೆ ನಡೆಸಿ, ಅವುಗಳು ಸುರಕ್ಷಿತ ಎಂದು ಖಾತ್ರಿಯಾದ ನಂತರವೇ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಭಾರತೀಯ ಔಷಧ ನಿಯಂತ್ರಕ (DCGI) ಮಾರ್ಗಸೂಚಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.