ADVERTISEMENT

ಸಂಸತ್‌ ಬಳಿ ರೈತರ ಪ್ರತಿಭಟನೆ 2ನೇ ದಿನಕ್ಕೆ; ಸಚಿವೆ ಮೀನಾಕ್ಷಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:11 IST
Last Updated 23 ಜುಲೈ 2021, 16:11 IST

ನವದೆಹಲಿ: ರೈತರನ್ನು ಆಕ್ಷೇಪಾರ್ಹ ಪದಗಳಿಂದ ನಿಂದಿಸಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರ ಕ್ರಮವನ್ನು ಸಂಯುಕ್ತ ಕಿಸಾನ್‌ ಮೋರ್ಚಾ ತೀವ್ರವಾಗಿ ಖಂಡಿಸಿದೆ.

ಕೃಷಿ ಕಾಯ್ದೆ ವಿರೋಧಿಸಿ ಸಂಸತ್‌ ಭವನದ ಬಳಿಯ ಜಂತರ್‌–ಮಂತರ್‌ ಎದುರು ಸಂಯುಕ್ತ ಕಿಸಾನ್‌ ಮೋರ್ಚಾ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು, ಪ್ರತಿಭಟನಾಕಾರರು ಲೇಖಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲೇ ರೈತರನ್ನು ಮವಾಲಿಗಳು (ಶಾಂತಿ ಕದಡುವವರು, ಕಿಲಾಡಿಗಳು) ಎಂದು ಜರಿದಿರುವ ಲೇಖಿ, ಕೂಡಲೇ ಕ್ಷಮೆ ಯಾಚಿಸಿದ್ದಾರಾದರೂ, ಈ ರೀತಿಯ ಹೇಳಿಕೆ ರೈತ ಸಮುದಾಯಕ್ಕೆ ಅವಮಾನ ಮಾಡಿದಂತಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ADVERTISEMENT

ಅಲ್ಲದೆ, ರೈತರ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಿಜೆಪಿ ವಕ್ತಾರ ಗೌರವ್‌ ಭಾಟಿಯಾ ಅವರೂ ಬೇಷರತ್‌ ಕ್ಷಮೆ ಕೋರಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಸಿರ್ಸಾ ಬಳಿ ಬಂಧನಕ್ಕೆ ಒಳಗಾಗಿದ್ದ ಐವರು ಸತ್ಯಾಗ್ರಹನಿರತ ರೈತರನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ, ರೈತ ಮುಖಂಡ ಬಲದೇವ್‌ ಸಿಂಗ್‌ ಸಿರ್ಸಾ ಅವರು ಐದು ದಿನಗಳಿಂದ ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದಿದ್ದಾಗಿ ಘೋಷಿಸಲಾಯಿತು.

ಸಂಸತ್‌ನಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ವಿದ್ಯುತ್‌ ಖಾಸಗೀಕರಣ ಮಸೂದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕೋರಿದ ರೈತರು, ಮೋರ್ಚಾದ ಪ್ರತಿನಿಧಿಗಳೊಂದಿಗೆ ಈ ಮೊದಲೇ ನಡೆಸಲಾದ ಔಪಚಾರಿಕ ಮಾತುಕತೆ ವೇಳೆ ನೀಡಿರುವ ಭರವಸೆಯಿಂದ ಹಿಂದೆ ಸರಿಯದಂತೆ ಸರ್ಕಾರವನ್ನು ಎಚ್ಚರಿಸಿದರು.

‘ಪ್ರತಿಭಟನಾ ನಿರತರೊಂದಿಗೆ ಕೇಂದ್ರವು ಮಾತುಕತೆಗೆ ಸಿದ್ಧವಿದೆ’ ಎಂದು ಪುನರುಚ್ಚರಿಸಿರುವ ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್‌ ತೋಮರ್‌ ಅವರಿಗೆ, ‘ನಮ್ಮ ಪ್ರಸ್ತಾವನೆಗಳನ್ನು ಈ ಹಿಂದೆಯೇ ಸಲ್ಲಿಸಲಾಗಿದೆ. ಬೇಡಿಕೆ ಏನೆಂಬುದೂ ನಿಮಗೆ ಗೊತ್ತಿದೆ’ ಎಂಬ ಸಂದೇಶವನ್ನು ರವಾನಿಸಲಾಗಿದೆ ಎಂದು ರೈತ ಮುಖಂಡರು ಇದೇ ವೇಳೆ ಹೇಳಿದರು.

ನಿಗದಿಯಂತೆ ಪ್ರತಿಭಟನಾಕಾರರು ಏರ್ಪಡಿಸಿರುವ ಕಿಸಾನ್‌ ಸಂಸತ್ತಿನಲ್ಲಿ 200 ಜನ ರೈತರು ಪಾಲ್ಗೊಂಡು, ಪ್ರಶ್ನೋತ್ತರ ವೇಳೆ ಹಾಗೂ ಮಸೂದೆಗಳ ಮೇಲಿನ ಚರ್ಚೆಗಳಲ್ಲಿ ಭಾಗವಹಿಸಿದರು.

ಕೃಷಿ ಕಾಯ್ದೆಯ ರದ್ದತಿ ಕೋರಿ ರೈತರು ನಡೆಸಿರುವ ಪ್ರತಿಭಟನೆಗೆ ಬೆಂಬಲ ನೀಡಿರುವ ವಿರೋಧ ಪಕ್ಷಗಳ ಸಂಸದರು, ಸಂಸತ್ ಭವನದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯೆದುರು ಬೆಳಿಗ್ಗೆ ಪ್ರತಿಭಟನೆ ನಡೆಸಿದರಲ್ಲದೆ, ರೈತರ ಬೇಡಿಕೆ ಒಳಗೊಂಡ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.