ADVERTISEMENT

ದೆಹಲಿ ಚಲೊ: ಷರತ್ತುಬದ್ಧ ಮಾತುಕತೆಗೆ ರೈತರ ತಿರಸ್ಕಾರ

ಪ್ರತಿಭಟನೆಯನ್ನು ಬುರಾಡಿ ಮೈದಾನಕ್ಕೆ ಸ್ಥಳಾಂತರಿಸಲು ಸರ್ಕಾರದ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 20:28 IST
Last Updated 29 ನವೆಂಬರ್ 2020, 20:28 IST
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ – ಪಿಟಿಐ ಚಿತ್ರ
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ – ಪಿಟಿಐ ಚಿತ್ರ   

ನವದೆಹಲಿ: ರೈತರ ಜತೆ ಮಾತುಕತೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ್ದ ಆಹ್ವಾನವನ್ನು ರೈತ ನಾಯಕರು ತಿರಸ್ಕರಿಸಿದ್ದಾರೆ. ಪ್ರತಿಭಟನೆ ಮುಂದುವರಿಸಿದ್ದಾರೆ.

ಸ್ವರಾಜ್ ಇಂಡಿಯಾ ಅಭಿಯಾನದ ಸಂಸ್ಥಾಪಕ ಯೋಗೇಂದ್ರ ಸೇರಿದಂತೆ 7 ನಾಯಕರ ನಿಯೋಗವು, ಅಮಿತ್ ಶಾ ಅವರ ಜತೆ ಮಾತುಕತೆ ನಡೆಸಲು ಸಿದ್ಧವಾಗಿತ್ತು.

'ಅಮಿತ್ ಶಾ ಅವರು ರೈತರ ಜತೆ ಮಾತುಕತೆ ನಡೆಸಲಿದ್ದಾರೆ. ಆದರೆ ರೈತರು ಬುರಾಡಿ ಮೈದಾನಕ್ಕೆ ಹೋಗಲು ಒಪ್ಪಿಕೊಳ್ಳಬೇಕು. ಆಗ ಮಾತ್ರ ಡಿಸೆಂಬರ್ 3ಕ್ಕೂ ಮೊದಲೇ ಮಾತುಕತೆ ಏರ್ಪಡಿಸುತ್ತೇವೆ' ಎಂದು ಸರ್ಕಾರವು ಷರತ್ತು ಹಾಕಿತ್ತು. ಈ ಷರತ್ತನ್ನು ಒಪ್ಪಿಕೊಳ್ಳಲು ರೈತ ನಾಯಕರು ತಿರಸ್ಕರಿಸಿದ್ದಾರೆ.

ADVERTISEMENT

'ನಾವು ಸರ್ಕಾರದ ಜತೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ. ಮಾತುಕತೆ ನಡೆಸುವುದರ ಬದಲು, ಸರ್ಕಾರವು ರೈತರ ಮೇಲೆ ಷರತ್ತು ಹಾಕುತ್ತಿದೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ರೈತ ನಾಯಕರು ಹೇಳಿದ್ದಾರೆ.

ಡಿಸೆಂಬರ್ 3ರಂದೇ ಮಾತುಕತೆ: 'ರೈತರ ಜತೆ ಮಾತುಕತೆ ನಡೆಸಲು ಸರ್ಕಾರದ ಸಂಪುಟ ದರ್ಜೆಯ ಹಲವು ಸಚಿವರು ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ 3ರಂದೇ ಮಾತುಕತೆ ನಡೆಯಲಿದೆ. ರೈತರು ಮಾತುಕತೆಗೆ ಬರಬೇಕು' ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಬಳ್ಳಾ ಮಾಹಿತಿ ನೀಡಿದ್ದಾರೆ.

'ಬುರಾಡಿ ಮೈದಾನದಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ಎಲ್ಲಾ ರೈತರು ಅಲ್ಲಿಗೆ ಹೋಗಬೇಕು. ಅಲ್ಲೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಪೊಲೀಸರು ಅನುಮತಿ ನೀಡುತ್ತಾರೆ' ಎಂದು ಅವರು ಹೇಳಿದ್ದಾರೆ.

'ರೈತರ ಬೇಡಿಕೆ ಈಡೇರಿದೆ'

'ಕೃಷಿ ಸುಧಾರಣಾ ಕಾಯ್ದೆಗಳು ರೈತರಿಗೆ ಹೊಸ ಅವಕಾಶಗಳನ್ನು ತೆರೆದಿವೆ. ಕಾಯ್ದೆ ಜಾರಿಯಾದ ಕೆಲವೇ ದಿನಗಳಲ್ಲಿ ಇದು ಸಾಧ್ಯವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಈ ಕಾಯ್ದೆಗಳಿಂದ ರೈತರ ಬಹುವರ್ಷಗಳ ಬೇಡಿಕೆ ಈಡೇರಿದೆ.ರೈತರ ಬೇಡಿಕೆಗಳನ್ನು ಪರಿಹರಿಸುತ್ತೇವೆ ಎಂದು ಎಲ್ಲಾ ರಾಜಕೀಯ ಪಕ್ಷಗಳೂ ಒಂದಿಲ್ಲೊಂದು ಸಮಯದಲ್ಲಿ ಭರವಸೆ ನೀಡೇ ಇವೆ. ಆದರೆ ಆ ಬೇಡಿಕೆಗಳು ಈಗ ಈಡೇರಿವೆ' ಎಂದು ಮೋದಿ ವಿವರಿಸಿದ್ದಾರೆ.

'ಸುದೀರ್ಘ ಚರ್ಚೆಯ ನಂತರ ಭಾರತದ ಸಂಸತ್ತು ಈ ಕಾಯ್ದೆಗಳಿಗೆ ಅನುಮೋದನೆ ನೀಡಿದೆ. ಈ ಕಾಯ್ದೆಗಳು ರೈತರ ಸಮಸ್ಯೆಗಳನ್ನು ಈಡೇರಿಸಿವೆ. ಈ ಹಿಂದೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ ಹಲವು ತಿಂಗಳ ನಂತರ ಹಣ ಪಡೆಯುವ ಸ್ಥಿತಿ ಇತ್ತು. ಈಗ ಉತ್ಪನ್ನ ಮಾರಾಟದ ನಂತರದ ಮೂರು ದಿನಗಳಲ್ಲಿ ರೈತರಿಗೆ ಹಣ ನೀಡಬೇಕು. ಇಲ್ಲದಿದ್ದರೆ ರೈತರು ದೂರು ನೀಡಲು ಅವಕಾಶವಿದೆ. ಈ ಕಾಯ್ದೆಗಳು ರೈತರಿಗೆ ಅವರ ಹಕ್ಕುಗಳು ದೊರೆಯುವಂತೆ ಮಾಡಿವೆ' ಎಂದು ಮೋದಿ ವಿವರಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.