ADVERTISEMENT

ಮೇ 17ರ ನಂತರ ಏನು?: ಕೇಂದ್ರ ಸರ್ಕಾರಕ್ಕೆ ಸೋನಿಯಾ ಗಾಂಧಿ ಪ್ರಶ್ನೆ

ಪಿಟಿಐ
Published 7 ಮೇ 2020, 1:12 IST
Last Updated 7 ಮೇ 2020, 1:12 IST
   

ನವದೆಹಲಿ: ‘ಕೋವಿಡ್-‌19ರಿಂದಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಎಷ್ಟು ಸಮಯ ಮುಂದುವರಿಸಬೇಕು ಎಂದು ನಿರ್ಣಯಿಸಲು ಕೇಂದ್ರ ಸರ್ಕಾರ ಯಾವ ಮಾನದಂಡ ಅನುಸರಿಸುತ್ತಿದೆ? ಮೇ 17ರ ನಂತರ ಏನು? ಹೇಗೆ?’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

‘ಕೋವಿಡ್-‌19 ಹಾಗೂ ಲಾಕ್‌ಡೌನ್‌ ನಂತರದ ಸ್ಥಿತಿ ಕುರಿತು ಚರ್ಚಿಸಲು, ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸೋನಿಯಾ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದರು. ಆ ವೇಳೆ ಅವರು ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲಾ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸಹ ಸಭೆಯಲ್ಲಿದ್ದರು.

ADVERTISEMENT

‘ಸೋನಿಯಾಜಿ ಅವರು ಪ್ರಶ್ನಿಸಿದಂತೆ ಲಾಕ್‌ಡೌನ್‌ 3.0 ನಂತರ ಏನಾಗುತ್ತದೆ ಎನ್ನುವುದು ನಮಗೆ ತಿಳಿಯಬೇಕು. ದೇಶದಲ್ಲಿ ಲಾಕ್‌ಡೌನ್‌ ತೆರವುಗೊಳಿಸಲು ಕೇಂದ್ರ ಸರ್ಕಾರ ಯಾವ ಯೋಜನೆ ರೂಪಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಬೇಕಿದೆ. ಸೋನಿಯಾಜಿ ಅವರು ಈಗಾಗಲೆ ಈ ವಿಷಯ ಪ್ರಸ್ತಾಪಿಸಿದ್ದಾರೆ’ ಎಂದು ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

‘ದೆಹಲಿಯಲ್ಲಿರುವವರು ಪ್ರಾದೇಶಿಕವಾಗಿ ಏನಾಗುತ್ತಿದೆ ಎನ್ನುವುದರ ಅರಿವಿಲ್ಲದೆ ಕೋವಿಡ್‌-19 ವಲಯಗಳನ್ನು ವರ್ಗೀಕರಿಸುತ್ತಿದ್ದಾರೆ ಎನ್ನುವುದು ಕಳವಳದ ಸಂಗತಿ' ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಸಭೆಯಲ್ಲಿ ಹೇಳಿದ್ದಾರೆ.

‘ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್‌ ನೀಡುವ ಕುರಿತು ಪ್ರಧಾನಿ ಒಂದು ಮಾತೂ ಆಡಿಲ್ಲ. ದೊಡ್ಡಮೊತ್ತದ ಪ್ಯಾಕೇಜ್‌ ನೀಡದ ಹೊರತು ರಾಜ್ಯಗಳು ಹಾಗೂ ದೇಶ ನಡೆಯುವುದು ಹೇಗೆ? ನಾವು 10 ಸಾವಿರ ಕೋಟಿ ಕಳೆದುಕೊಂಡಿದ್ದೇವೆ’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.