ADVERTISEMENT

ಪ್ರತಿಭಟನಾನಿರತ ರೈತರೊಂದಿಗೆ ಪ್ರಧಾನಿ ಮೋದಿ ಮಾತನಾಡಲಿ: ಕಾಂಗ್ರೆಸ್ ಒತ್ತಾಯ

ಪಿಟಿಐ
Published 27 ಸೆಪ್ಟೆಂಬರ್ 2021, 14:55 IST
Last Updated 27 ಸೆಪ್ಟೆಂಬರ್ 2021, 14:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಭಾರತ್ ಬಂದ್‌ನ ಭಾಗವಾಗಿ ವಿವಿಧೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾನಿರತ ರೈತರೊಂದಿಗೆ ಮಾತನಾಡಬೇಕು ಮತ್ತು ಅವರ ನ್ಯಾಯಯುತ ಕುಂದುಕೊರತೆಗಳನ್ನು ಆಲಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಒತ್ತಾಯಿಸಿದೆ.

ರೈತರ ಕುಂದುಕೊರತೆಗಳನ್ನು ಪರಿಹರಿಸುವ ಬದಲು ಅವರನ್ನು ದೇಶದ ಶತ್ರುಗಳೆಂದು ಬಣ್ಣಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಅದಕ್ಕಾಗಿಯೇ ರೈತರು ರಸ್ತೆಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರೈತರ ಪ್ರತಿಭಟನೆಯ ನೇತೃತ್ವದ ವಹಿಸಿರುವ 40ಕ್ಕೂ ಹೆಚ್ಚು ಕೃಷಿ ಸಂಘಟನೆಗಳ ಒಕ್ಕೂಟ ಸಂಸ್ಥೆ ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರವು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಭಾರತ್ ಬಂದ್‌ಗೆ ಕರೆ ನೀಡಿತ್ತು.

ADVERTISEMENT

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರ ಅಹಿಂಸಾತ್ಮಕ ಸತ್ಯಾಗ್ರಹವು ಇನ್ನೂ ದೃಢವಾಗಿದೆ. ಆದರೆ, 'ಶೋಷಿತ' ಸರ್ಕಾರವು ಇದನ್ನು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ 'ಭಾರತ್ ಬಂದ್'ಗೆ ಕರೆ ನೀಡಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಕಿಸಾನೋ ಕಾ ಅಹಿಂಸಕ್ ಸತ್ಯಾಗ್ರಹ್ ಆಜ್ ಭೀ ಅಖಂಡ್ ಹೈ, ಲೇಖಿ ಶೋಷಂಕರ್ ಸರ್ಕಾರ ಕೋ ಯೇ ನಹಿ ಪಸಂದ್ ಹೈ, ಇಸ್ಲಿಯೇ ಆಜ್ ಭಾರತ್ ಬಂದ್ ಹೈ' (ರೈತರ ಅಹಿಂಸಾತ್ಮಕ ಸತ್ಯಾಗ್ರಹವು ಇಂದಿಗೂ ದೃಢವಾಗಿದೆ, ಆದರೆ ರೈತರನ್ನು ಶೋಷಿಸುತ್ತಿರುವ ಸರ್ಕಾರವು ಇದನ್ನು ಇಷ್ಟಪಡುವುದಿಲ್ಲ ಮತ್ತು ಅದಕ್ಕಾಗಿಯೇ ಇಂದು ಭಾರತ್ ಬಂದ್ ನಡೆಯುತ್ತಿದೆ) ಎಂದಿದ್ದಾರೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಸುದ್ದಿಗಾರರೊಂದಿಗೆ ಮಾತನಾಡಿ, 'ರೈತರು ತಲ್ಲಣ ಮತ್ತು ಅಸಹಾಯಕತೆಯನ್ನು ಎದುರಿಸುತ್ತಿದ್ದಾರೆ. ಅದರ ಆಧಾರದ ಮೇಲೆ ಅವರು ಬಂದ್‌ಗೆ ಕರೆ ನೀಡಿದ್ದಾರೆ. ರೈತರ ಈ ಬಂದ್ ಅನ್ನು ನಮ್ಮ ಪಕ್ಷವು ತುಂಬು ಹೃದಯದಿಂದ ಬೆಂಬಲಿಸುತ್ತದೆ. ನಾವು ರೈತರೊಂದಿಗೆ ಒಗ್ಗಟ್ಟಾಗಿ ನಿಲ್ಲಬೇಕು, ಇಲ್ಲದಿದ್ದರೆ ನಮ್ಮ ರಾಷ್ಟ್ರದ ಭವಿಷ್ಯ ಕತ್ತಲೆಯಲ್ಲಿ ಮುಳುಗುತ್ತದೆ' ಎಂದು ತಿಳಿಸಿದರು.

'ದೇಶವು ಅನೇಕ ಪ್ರಧಾನ ಮಂತ್ರಿಗಳನ್ನು ಕಂಡಿದೆ ಮತ್ತು ಮೋದಿಯ ನಂತರ ಇನ್ನೂ ಅನೇಕರನ್ನು ನೋಡುತ್ತದೆ. ನೀವು ಪ್ರಧಾನಿಯಾಗಿರುವಾಗ ಅಹಂಕಾರದಿಂದ ವರ್ತಿಸಲು ಸಾಧ್ಯವಿಲ್ಲ. ನೀವು ನಿಮ್ಮ ದೇಶದ ಮಾತನ್ನು ಆಲಿಸಬೇಕು ಮತ್ತು ನಿಮ್ಮ ದೇಶದ ಶೇಕಡಾ 60 ರಷ್ಟು ಜನರು ಮಾತನಾಡುವಾಗ ದಯವಿಟ್ಟು ಅವರೊಂದಿಗೆ ಮಾತನಾಡಿ' ಎಂದು ಅವರು ಹೇಳಿದರು. ಎಂದು ಹೇಳಿದರು.

'ದೇಶದ ಜನರನ್ನು ದಿಕ್ಕುತಪ್ಪಿಸುವ ನಿಮ್ಮ ತಂತ್ರಗಳಲ್ಲಿ ನಿಮಗೆ ವಿಚಿತ್ರವಾದ ವಿಶ್ವಾಸ ಮತ್ತು ನಂಬಿಕೆಯಿದೆ. ಚುನಾವಣೆಗಳು ಬಂದಾಗ ನೀವು ತುಂಬಾ ವಿಶ್ವಾಸ ಹೊಂದಿರುತ್ತೀರಿ ಮತ್ತು ರೈತರು ಇಂದು ಎದುರಿಸುತ್ತಿರುವ ಮೂಲಭೂತ ನಿರ್ಣಾಯಕ ಸಮಸ್ಯೆಗಳಿಂದ ನೀವು ಮತ್ತೊಮ್ಮೆ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಆಗ ಸಾಧ್ಯವಾಗುತ್ತದೆ. ಆದರೆ, ನನ್ನನ್ನು ಕ್ಷಮಿಸಿ, ಇದು ಮತ್ತೆ ಮರುಕಳಿಸುವುದಿಲ್ಲ' ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

'ಸರ್ಕಾರವು ಕೃಷಿ ಸಲಕರಣೆಗಳ ಮೇಲೆ ಜಿಎಸ್‌ಟಿ ವಿಧಿಸಿದೆ. ಇದು ಸಾಕಾಗುವುದಿಲ್ಲ ಎಂಬಂತೆ, ಅವರು ರೈತರೊಂದಿಗೆ ಸಮಾಲೋಚನೆ ನಡೆಸದೆಯೇ ಮೂರು ಕರಾಳ ಕೃಷಿ ಕಾನೂನುಗಳನ್ನು ಜಾರಿಗೆ ತಂದರು. ಇದರ ವಿರುದ್ಧವೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಮತ್ತು ಪ್ರಜಾಪ್ರಭುತ್ವದ ಎಲ್ಲ ನಿಯಮಗಳು ಮತ್ತು ಸಂಸದೀಯ ಪದ್ಧತಿಗಳನ್ನು ಬುಡಮೇಲು ಮಾಡಿದರು' ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳು ಇಲ್ಲಿಯವರೆಗೆ 11 ಸುತ್ತಿನ ಮಾತುಕತೆ ನಡೆಸಿದ್ದು, ಕೊನೆಯದಾಗಿ ಜನವರಿ 22 ರಂದು ನಡೆದ ಸಭೆಯು ಮುರಿದುಬಿದ್ದಿತ್ತು. ಜನವರಿ 26 ರಂದು ಪ್ರತಿಭಟನಾ ನಿರತ ರೈತರು ನಡೆಸಿದ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಉಂಟಾದ ಹಿಂಸಾಚಾರದ ನಂತರ ಮಾತುಕತೆ ಪುನರಾರಂಭವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.