ಬಿಜೆಪಿ, ಕಾಂಗ್ರೆಸ್ ಧ್ವಜಗಳು (ಒಳಚಿತ್ರದಲ್ಲಿ ಜೈರಾಮ್ ರಮೇಶ್)
ನವದೆಹಲಿ: ಪಾಕಿಸ್ತಾನವು ಭಯೋತ್ಪಾದನೆಗೆ ನೆರವು ನೀಡುತ್ತಿರುವುದನ್ನು ಬಯಲು ಮಾಡುವ ಸಲುವಾಗಿ ವಿದೇಶಗಳಿಗೆ ತೆರಳಿರುವ ಸಂಸದರನ್ನು ಕಾಂಗ್ರೆಸ್ ಪಕ್ಷವು ಉಗ್ರರಿಗೆ ಹೋಲಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.
ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ 50ನೇ ವರ್ಷದ ಅಂಗವಾಗಿ ಜೂನ್ 25–26ರಂದು ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದನ್ನು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸರ್ಕಾರವು ಜನರ ಗಮನವನ್ನು ಗಂಭೀರ ಸಮಸ್ಯೆಗಳ ಬದಲಾಗಿ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಪಹಲ್ 'ನಮ್ಮ ಸಂಸದರು ವಿದೇಶದಲ್ಲಿ ಸುತ್ತಾಡುತ್ತಿದ್ದಾರೆ. ಉಗ್ರರೂ ಓಡಾಡಿಕೊಂಡಿದ್ದಾರೆ' ಎಂದು ಹೇಳಿದ್ದರು.
'ಪಾಕಿಸ್ತಾನ ಮತ್ತು ಭಯೋತ್ಪಾದಕರನ್ನು ಗುರಿಯಾಗಿಸಬೇಕಾದ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವತ್ತ ಆಸಕ್ತಿ ತೋರುತ್ತಿದೆ' ಎಂದು ಲೇವಡಿ ಮಾಡಿದ್ದರು. ಹಾಗೆಯೇ, ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತು ಸಂಸತ್ತಿನ ವಿಶೇಷ ಅದಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದರು.
ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, 'ವಿದೇಶಗಳಲ್ಲಿ ಪಾಕಿಸ್ತಾನದ ಮುಖವನ್ನು ಬಯಲು ಮಾಡುತ್ತಿರುವ ಸರ್ವಪಕ್ಷಗಳ ಸಂಸದರು ವಾಸ್ತವದಲ್ಲಿ ಭಯೋತ್ಪಾದಕರಿದ್ದಂತೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ' ಎಂದು ಆರೋಪಿಸಿದ್ದಾರೆ.
'ರಾಜತಾಂತ್ರಿಕ ಹೊಡೆತದ ಮೂಲಕ ಪಾಕಿಸ್ತಾನವನ್ನು ಮೂಲೆಗುಂಪು ಮಾಡುತ್ತಿರುವ ಹೊತ್ತಿನಲ್ಲಿ, ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಆ ರಾಷ್ಟ್ರದ ಪರವಾಗಿ ಮಾತನಾಡಲು ಮುಂದಾಗುತ್ತಿದೆ. ಸಂಸದರನ್ನು ಉಗ್ರರು ಎಂದು ಹೇಳುತ್ತಿದೆ' ಎಂದು ಆರೋಪಿಸಿದ್ದಾರೆ. ಮುಂದುವರಿದು, ವಿದೇಶಗಳಿಗೆ ಭೇಟಿ ನೀಡಿರುವ ನಿಯೋಗಗಳಲ್ಲಿರುವ ಡಿಎಂಕೆ ಸಂಸದೆ ಕನಿಮೋಳಿ, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ ಹಾಗೂ ಸಮಾಜವಾದಿ ಪಕ್ಷದ ರಾಜೀವ್ ರೈ ಅವರೂ ಭಯೋತ್ಪಾದಕರೇ ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ.
'ಕೈ' ನಾಯಕನ ಹೇಳಿಕೆಯು ಪಾಕಿಸ್ತಾನ ವಿರುದ್ಧ ಭಾರತದ ರಾಜತಾಂತ್ರಿಕ ತಂತ್ರಕ್ಕೆ ಮಾಡಿದ ಅಪಮಾನವಾಗಿದೆ. ಇದು (ಹೇಳಿಕೆ) ಆ ಪಕ್ಷದ ಮನಸ್ಥಿತಿಯನ್ನು ತೋರುತ್ತದೆ ಎಂದೂ ಪ್ರತಿಪಾದಿಸಿರುವ ಪೂನಾವಾಲಾ, ಈ ವಿಚಾರದ ಬಗ್ಗೆ ಸಂಸತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಆರೋಪಗಳಿಗೆ ಜೈರಾಮ್ ರಮೇಶ್ ಅವರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.