ADVERTISEMENT

ಅಧಿಕೃತ ಬಣದ ಅಭ್ಯರ್ಥಿ ಯಾರಾಗಬೇಕು? ಸೋನಿಯಾ ವಾಪಸ್‌ ಬಳಿಕ ನಿರ್ಧಾರ

‘ಕೈ’ ಅಧಿಕೃತ ಬಣದ ಅಭ್ಯರ್ಥಿ ಘೋಷಣೆ

ಪಿಟಿಐ
Published 4 ಸೆಪ್ಟೆಂಬರ್ 2022, 19:18 IST
Last Updated 4 ಸೆಪ್ಟೆಂಬರ್ 2022, 19:18 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ    

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಬಣದ ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿದೇಶದಿಂದ ಮರಳಿದ ಬಳಿಕ ನಿರ್ಧರಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸೋನಿಯಾ ಅವರು ಇದೇ 10ರಂದು ದೇಶಕ್ಕೆ ಮರಳಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆಸ್ಪರ್ಧಿಸುವುದಿಲ್ಲ ಎಂಬ ನಿಲುವನ್ನು ರಾಹುಲ್‌ ಗಾಂಧಿ ಅವರು ಬದಲಿಸಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಅವರನ್ನು ಸೋನಿಯಾ ಅವರು ಕೋರಿದ್ದಾರೆ ಎನ್ನಲಾಗಿದೆ. ಆದರೆ, ಗೆಹಲೋತ್ ಅವರೂ ಈ ಕುರಿತು ಆಸಕ್ತಿ ತೋರ್ಪಡಿಸಿಲ್ಲ.

ಸೋನಿಯಾ ಗಾಂಧಿ ಅವರು ಭಾರತಕ್ಕೆ ಬಂದ ಬಳಿಕ ಗೆಹಲೋತ್ ಸೇರಿದಂತೆ ಪ್ರಮುಖ ಮುಖಂಡರ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ. ಜಿ–23 ಗುಂಪು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಜ್ಜಾಗಿದೆ. ಈ ಗುಂಪಿನಿಂದ ಶಶಿ ತರೂರ್ ಅವರು ಅಭ್ಯರ್ಥಿ ಯಾಗುವ ಸಾಧ್ಯತೆ ಇದೆ. ಮತದಾರರ ಯಾದಿಯನ್ನು ಬಹಿರಂಗಪ‍ಡಿಸಬೇಕುಎಂಬ ಕೂಗು ಈ ಗುಂಪಿನಿಂದ ಬಲವಾಗಿ ಕೇಳಿ ಬಂದಿದೆ.

ಅಶೋಕ್‌ ಗೆಹಲೋತ್ ಅವರಿಗೆ ರಾಜಸ್ಥಾನ ಬಿಟ್ಟು ಹೋಗಲು ಇಷ್ಟ ಇಲ್ಲ. ಅದರಲ್ಲೂ ವಿಧಾನಸಭೆಗೆ ಚುನಾವಣೆ ನಡೆಯಲು ವರ್ಷವಷ್ಟೇ ಇರುವ ಈ ಸಂದರ್ಭದಲ್ಲಿ ಮತ್ತೊಂದು ಬಾರಿ ಅದೃಷ್ಟ ಪರೀಕ್ಷೆಗಿಳಿಯಲು ಅವರು ಸಿದ್ಧರಾಗುತ್ತಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಕುರಿತು ಅವರು ಈವರೆಗೆ ಏನನ್ನೂ ಹೇಳಿಲ್ಲ.

ADVERTISEMENT

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೂ ರಾಜಸ್ಥಾನ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ಕೊಡಬೇಕು ಅಥವಾ ತಮ್ಮ ಆಯ್ಕೆಯ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು.ಸಚಿನ್‌ ಪೈಲಟ್‌ ಅವರನ್ನು ಮುಖ್ಯಮಂತ್ರಿ ಮಾಡಬಾರದು ಎಂಬ ಷರತ್ತುಗಳನ್ನು ಗೆಹಲೋತ್‌ ಮುಂದಿಟ್ಟಿದ್ದಾರೆ. ಪಕ್ಷದ ನಾಯಕತ್ವಕ್ಕೆ ಈ ಷರತ್ತುಗಳು ಇಷ್ಟವಾಗಿಲ್ಲ.

ಅಶೋಕ್‌ ಗೆಹಲೋತ್ ಅವರ ಮನವೊಲಿಸುವುದು ಸೋನಿಯಾ ಅವರಿಗೆ ಸಾಧ್ಯವಾಗಬಹುದು ಎಂದು ಪಕ್ಷದ ಹಲವು ಮುಖಂಡರು ಭಾವಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್‌ನ ಹಲವು ಮುಖಂಡರು ಒತ್ತಾಯಿಸಿದ್ದಾರೆ. ಆದರೆ, ‘ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ರಾಹುಲ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌ ಇತ್ತೀಚೆಗೆ ಹೇಳಿದ್ದರು.

ರಾಹುಲ್ ಅವರನ್ನು ಮನವೊಲಿಸುವ ಪ್ರಯತ್ನ ಮತ್ತೆ ನಡೆಯಬಹುದು ಎನ್ನಲಾಗಿದೆ.

ಅಧ್ಯಕ್ಷ ಸ್ಥಾನವನ್ನು ಹೊಂದಿಲ್ಲದಿದ್ದರೂ ಪಕ್ಷದ ಚಾಲಕ ಶಕ್ತಿಯಾಗಿ ರಾಹುಲ್‌ ಗಾಂಧಿ ಅವರೇ ಇದ್ದಾರೆ. ಇದೇ 7ರಿಂದ ಆರಂಭವಾಗುವ‘ಭಾರತ ಒಗ್ಗೂಡಿಸಿ’ ಯಾತ್ರೆಗೂ ಅವರದ್ದೇ ನೇತೃತ್ವ ಇರಲಿದೆ. ವಿಧಾನಸಭೆಗೆ ಚುನಾವಣೆ ನಡೆಯಲಿರುವ ಗುಜರಾತ್‌ನ ಮತಗಟ್ಟೆ ಮಟ್ಟದ ಕಾರ್ಯಕರ್ತರ ಜತೆಗೆಸಂವಾದ ನಡೆಸಲು ಅವರು ಅಹಮದಾಬಾದ್‌ಗೆ ಸೋಮವಾರ ಹೋಗಲಿದ್ದಾರೆ.

ಪಕ್ಷ ತೊರೆದ ಗುಜರಾತ್‌ ಯುವ ಕಾಂಗ್ರೆಸ್‌ ಅಧ್ಯಕ್ಷ

(ಅಹಮದಾಬಾದ್‌ ವರದಿ): ಗುಜರಾತ್ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವನಾಥ್‌ ವಘೇಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಹರಪಾಲ್‌ಸಿಂಹ ಚೂಡಾಸಮಾ ಅವರನ್ನು ನೇಮಿಸಲಾಗಿದೆ. ರಾಹುಲ್‌ ಗಾಂಧಿ ಅವರು ಗುಜರಾತ್‌ಗೆ ಸೋಮವಾರ ಭೇಟಿ ನೀಡಲಿದ್ದಾರೆ. ಅದರ ಮುನ್ನಾದಿನ ಈ ಬೆಳವಣಿಗೆ ನಡೆದಿದೆ.

ಪಕ್ಷದಲ್ಲಿನ ಗುಂಪುಗಾರಿಕೆಯೇ ತಮ್ಮ ರಾಜೀನಾಮೆಗೆ ಕಾರಣ ಎಂದು ವಘೇಲಾ ಹೇಳಿದ್ದಾರೆ. ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ₹1.70 ಕೋಟಿ ನೀಡಿದ್ದೆ ಎಂದೂ ಅವರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಕಾಂಗ್ರೆಸ್‌ ಅಲ್ಲಗಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.