ADVERTISEMENT

ಸ್ವಜನಪಕ್ಷಪಾತ, ಭ್ರಷ್ಟಾಚಾರ ಮೀರಿ ಕಾಂಗ್ರೆಸ್‌ ಯೋಚಿಸುವುದಿಲ್ಲ: ಪ್ರಧಾನಿ ಮೋದಿ

ಪಿಟಿಐ
Published 24 ಫೆಬ್ರುವರಿ 2024, 13:27 IST
Last Updated 24 ಫೆಬ್ರುವರಿ 2024, 13:27 IST
<div class="paragraphs"><p>ಪ್ರಧಾನಿ ಮೋದಿ</p></div>

ಪ್ರಧಾನಿ ಮೋದಿ

   

(ಚಿತ್ರ ಕೃಪೆ–ಪಿಟಿಐ)

ರಾಯ್‌ಪುರ: ಕಾಂಗ್ರೆಸ್‌ ಪಕ್ಷವು ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ತುಷ್ಟೀಕರಣವನ್ನು ಮೀರಿ ಯೋಚಿಸುವುದಿಲ್ಲ. ದೇಶದ ಅಭಿವೃದ್ಧಿ ಎಂದಿಗೂ ಅದರ ಕಾರ್ಯಸೂಚಿಯಲ್ಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ವಿಕಸಿತ ಭಾರತ, ವಿಕಸಿತ ಛತ್ತೀಸ್‌ಗಢ ಕಾರ್ಯಕ್ರಮದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ಸ್ವಾತಂತ್ರ್ಯದ ನಂತರ, ದೇಶದಲ್ಲಿ ದೀರ್ಘ ಕಾಲ ಕಾಂಗ್ರೆಸ್‌ ಆಡಳಿತ ನಡೆಸಿದೆ. ಆದರೆ, ಅವರ ಗಮನ ಕೇವಲ ಸರ್ಕಾರ ರಚನೆಯತ್ತ ಮಾತ್ರ ಇತ್ತು. ದೇಶದ ಭವಿಷ್ಯವನ್ನು ಅದು ನಿರ್ಮಿಸಲಿಲ್ಲ’ ಎಂದು ಆರೋಪಿಸಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಇದರೊಂದಿಗೆ ಛತ್ತೀಸ್‌ಗಢವು ಅಭಿವೃದ್ದಿಯಲ್ಲಿ ಹೊಸ ಎತ್ತರಕ್ಕೆ ತಲುಪಲಿದೆ ಎಂದು ಅವರು ಹೇಳಿದ್ದಾರೆ.

‘ಸ್ವಾತಂತ್ರ್ಯದ ನಂತರ ದೀರ್ಘ ಕಾಲ ದೇಶದಲ್ಲಿ ಆಡಳಿತ ನಡೆಸಿದವರ ಚಿಂತನೆಗಳು ದೊಡ್ಡದಾಗಿರಲಿಲ್ಲ. ಅವರು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಹಲವು ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ದೇಶದ ಭವಿಷ್ಯವನ್ನು ನಿರ್ಮಿಸುವುದನ್ನು ಮರೆತಿದೆ’ ಎಂದು ಅವರು ತಿಳಿಸಿದ್ದಾರೆ.

‍‘ಪರಿವಾರವಾದ, ಭ್ರಷ್ಟಾಚಾರ ಮತ್ತು ತುಷ್ಟೀಕರಣದ ಆಚೆಗೆ ಕಾಂಗ್ರೆಸ್‌ ಯೋಚಿಸುವುದಿಲ್ಲ. ತಮ್ಮ ಪುತ್ರರು ಮತ್ತು ಪುತ್ರಿಯರ ಭವಿಷ್ಯವನ್ನು ರೂಪಿಸುವಲ್ಲಿ ನಿರತರಾಗಿರುವವರು, ನಿಮ್ಮ ಪುತ್ರರು ಮತ್ತು ಪುತ್ರಿಯರ ಬಗ್ಗೆ ಎಂದಿಗೂ ಯೋಚಿಸಲು ಸಾಧ್ಯವಿಲ್ಲ’ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಅಭಿವೃದ್ಧಿ ಹೊಂದಿದ ಛತ್ತೀಸಗಢ ನಿರ್ಮಾಣಕ್ಕೆ ಬಡವರು, ಯುವಕರು ಹಾಗೂ ಮಹಿಳೆಯರ ಸಬಲೀಕರಣ ಅಗತ್ಯ. ರಾಜ್ಯದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರವು ಬಡವರಿಗಾಗಿ ಸಿದ್ಧಗೊಳ್ಳುತ್ತಿದ್ದ ಮನೆಗಳ ನಿರ್ಮಾಣವನ್ನು ಸ್ಥಗಿತಗೊಳಿಸಿತ್ತು. ಆದರೆ, ಬಿಜೆಪಿ ಸರ್ಕಾರವು ಅದನ್ನು ಮತ್ತೆ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.

ಸುಮಾರು ₹34,400 ಕೋಟಿಗೂ ಹೆಚ್ಚಿನ ಮೊತ್ತದ ಹತ್ತು ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.