ADVERTISEMENT

ಸ್ವಾತಂತ್ರ್ಯಾ ನಂತರ ಮೊದಲ ಬಾರಿ ಬಿಹಾರದಲ್ಲಿ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ

ಪಿಟಿಐ
Published 23 ಸೆಪ್ಟೆಂಬರ್ 2025, 15:23 IST
Last Updated 23 ಸೆಪ್ಟೆಂಬರ್ 2025, 15:23 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣಾ ಕಾರ್ಯತಂತ್ರದ ಕುರಿತು ಚರ್ಚಿಸಲು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆ (ಸಿಡಬ್ಲ್ಯೂಸಿ) ಇಲ್ಲಿನ ಸದಾಖತ್‌ ಆಶ್ರಮದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.  

ಸ್ವಾತಂತ್ರ್ಯಾ ನಂತರ ಬಿಹಾರದಲ್ಲಿ ನಡೆಯುತ್ತಿರುವ ಮೊದಲ ‘ಸಿಡಬ್ಲ್ಯೂಸಿ’ ಸಭೆ ಇದಾಗಿದ್ದು, ಈ ಸಭೆಯ ಮೂಲಕ ಬಿಹಾರವು ರಾಷ್ಟ್ರ ರಾಜಕಾರಣದ ಕೇಂದ್ರ ಬಿಂದು ಆಗಲಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಮಹಾ ಘಟಬಂಧನ್‌ ಮೈತ್ರಿಕೂಟದ ನಡುವೆ ಸೀಟು ಹಂಚಿಕೆ ಮಾತುಕತೆ ನಡೆದಿರುವುದು, ರಾಹುಲ್‌ ಗಾಂಧಿ ನಡೆಸಿದ ‘ಮತದಾರರ ಅಧಿಕಾರ ಯಾತ್ರೆ’ ಸಮಾರೋಪಗೊಂಡ ಬೆನ್ನಲ್ಲೇ ‘ಸಿಡಬ್ಲ್ಯೂಸಿ’ ಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.

ADVERTISEMENT

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮತ್ತು ‘ಮತ ಕಳ್ಳತನ’ ಆರೋಪದಲ್ಲಿ ಬಿಜೆಪಿ ವಿರುದ್ಧದ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಲು ಕಾಂಗ್ರೆಸ್‌ ನಿರ್ಧರಿಸಿದ್ದು, ಮುಂದಿನ ಹಂತದ ನಡೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್‌ ಸಮತಿಗಳ ಅಧ್ಯಕ್ಷರು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರು ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸಲಿದ್ದು, ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  

‘ಪ್ರಜಾಪ್ರಭುತ್ವವನ್ನು ನಾಶಮಾಡಲು ಹೊರಟಿರುವವರನ್ನು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಕ್ಷಿಸುತ್ತಿದ್ದಾರೆ’ ಎಂದು ಆರೋಪಿಸಿದ್ದ ರಾಹುಲ್‌ ಗಾಂಧಿ, ಇದನ್ನು ಸಮರ್ಥಿಸಿಕೊಳ್ಳಲು ಕರ್ನಾಟಕದ ವಿಧಾನಸಭಾ ಕ್ಷೇತ್ರವೊಂದರ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್‌ ಬೆಂಬಲಿಗರ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕಲಾಗಿದೆ ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ಆಯೋಗವು ಈ ಆರೋಪವನ್ನು ‘ತಪ್ಪು ಮತ್ತು ಆಧಾರ ರಹಿತ’ ಎಂದು ಅಲ್ಲಗಳೆದಿತ್ತು.

ಕಾಂಗ್ರೆಸ್‌ ಬಿಹಾರದಲ್ಲಿ ಎರಡನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧವಾಗಿದೆ. ಇದರ ಭಾಗವಾಗಿ ’ಸಿಡಬ್ಲ್ಯೂಸಿ’ ಸಭೆ ನಡೆಯುತ್ತಿದೆ.
ಕೃಷ್ಣ ಅಲ್ಲವರು ಬಿಹಾರ ಕಾಂಗ್ರೆಸ್‌ ಉಸ್ತುವಾರಿ

ಚುನಾವಣಾ ಆಯೋಗದ ಮೇಲೆ ಅಪನಂಬಿಕೆ ಹೆಚ್ಚಿಸಿದ ಬಿಜೆಪಿ: ಶರದ್‌ ಪವಾರ್

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಚುನಾವಣಾ ಆಯೋಗದ ಕಾರ್ಯವನ್ನು ಪ್ರಶ್ನಿಸಿದಾಗಲೆಲ್ಲ ಬಿಜೆಪಿ ಮುಖಂಡರು ವಾಡಿಕೆಯಂತೆ ಪ್ರತಿಕ್ರಿಯಿಸುತ್ತಿರುವುದು ಜನರಲ್ಲಿ  ಚುನಾವಣಾ ಆಯೋಗದ ಮೇಲೆ ಅಪನಂಬಿಕೆ ಹೆಚ್ಚುವಂತೆ ಮಾಡಿದೆ’ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಹೇಳಿದ್ದಾರೆ.

‘ಮತಕಳ್ಳತನ’ ಆರೋಪದ ಮೂಲಕ ರಾಹುಲ್‌ ಗಾಂಧಿ ಮತ್ತು ವಿರೋಧ ಪಕ್ಷದ ಮುಖಂಡರು ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಆಯೋಗವು ಇದಕ್ಕೆ ಉತ್ತರ ನೀಡುವ ಬದಲಿಗೆ ಆ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿಯು ಆಯೋಗದ ಮೇಲೆ ಮತದಾರರಲ್ಲಿ ಅಪನಂಬಿಕೆ ಹೆಚ್ಚುವಂತೆ ಮಾಡಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.