ನವದೆಹಲಿ: ಗುಜರಾತ್‌ನಲ್ಲಿ ಕಳೆದ 4 ವರ್ಷಗಳಲ್ಲಿ 16 ಸೇತುವೆ ಕುಸಿತ ದುರಂತಗಳು ಸಂಭವಿಸಿದ್ದು, ಈ ಪ್ರಕರಣಗಳನ್ನು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಗುರುವಾರ ಆಗ್ರಹಿಸಿದೆ.
ಅಲ್ಲದೇ, ಎಸ್‌ಐಟಿ ತನಿಖೆ ಆಗದೇ ಇದ್ದಲ್ಲಿ ಬೀದಿಗಿಳಿದು ಪ್ರತಿಭಟಿಸುವುದಾಗಿಯೂ ಎಚ್ಚರಿಸಿದೆ. ವಡೋದರ ಸೇತುವೆ ಕುಸಿತ ದುರಂತದ ಬೆನ್ನಲ್ಲೇ ಕಾಂಗ್ರೆಸ್ ಈ ವಿಚಾರ ಪ್ರಸ್ತಾಪಿಸಿ, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ರಾಜೀನಾಮೆ ನೀಡಬೇಕು ಎಂದೂ ಪಟ್ಟುಹಿಡಿದಿದೆ.
ಇದಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದೇಶದಲ್ಲಿ ಅಪಘಾತಗಳು ಸಾಮಾನ್ಯವಾಗಿವೆ. ಕೆಲವೊಮ್ಮೆ ರೈಲು ಅಪಘಾತಗಳಾಗುತ್ತಿದ್ದರೆ ಮತ್ತೊಮ್ಮೆ ಹೊಸದಾಗಿ ನಿರ್ಮಿಸಿದ ಸೇತುವೆಗಳಲ್ಲೇ ಬಿರುಕು ಕಾಣಿಸಿಕೊಳ್ಳುತ್ತದೆ. ವಿಮಾನ ದುರಂತದ ನೋವಿನಿಂದ ದೇಶ ಚೇತರಿಸಿಕೊಳ್ಳುವ ಮೊದಲೇ ಗುಜರಾತ್‌ನ ಸೇತುವೆ ದುರಂತ ನಡೆದಿದೆ‘ ಎಂದಿದ್ದಾರೆ.
ಅಲ್ಲದೇ,‘ 3 ವರ್ಷದ ಹಿಂದೆಯೇ ಸೇತುವೆ ಅಪಾಯದ ಸ್ಥಿತಿಯಲ್ಲಿದೆ ಎಂದು ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. 2021ರಿಂದ ಇದು 7ನೇ ಸೇತುವೆ ಕುಸಿತ ಘಟನೆಯಾಗಿದೆ. ಆಡಳಿತದ ಸೋಗಿನಲ್ಲಿ ಭಾಷಣಗಳನ್ನು ಮಾಡತ್ತಾ, ಜಾಹೀರಾತುಗಳನ್ನು ನೀಡುವುದರಲ್ಲಿ ಬಿಜೆಪಿ ನಾಯಕರು ನಿರತರಾಗಿದ್ದಾರೆ. ಬಿಜೆಪಿಯ ನಿರ್ಲಕ್ಷ್ಯದ ವರ್ತನೆ ಮಿತಿ ಮೀರಿದೆ’ ಎಂದೂ ಖರ್ಗೆ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.