ADVERTISEMENT

ಗಡಿ ವಿವಾದ | ಡಬಲ್ ಎಂಜಿನ್ ಸರ್ಕಾರವೆಂದು ಎದೆ ಬಡಿದುಕೊಂಡರೆ ಸಾಲದು: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಡಿಸೆಂಬರ್ 2022, 5:17 IST
Last Updated 8 ಡಿಸೆಂಬರ್ 2022, 5:17 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ಕರ್ನಾಟಕ –ಮಹಾರಾಷ್ಟ್ರ ನಡುವೆ ಉದ್ಭವಿಸಿರುವ ಗಡಿ ವಿವಾದವನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗಡಿ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ವಿವಾದಗಳನ್ನು ಬೆಳೆಯಲು ಬಿಟ್ಟು ರಾಜಕೀಯಕ್ಕೆ ಬಳಸುವುದು ಬಿಜೆಪಿ ಪಕ್ಷದ ಹುಟ್ಟುಗುಣ. ಸಂಧಾನದ ಮೂಲಕ ಪರಿಹರಿಸಬೇಕಿದ್ದ ಬೆಳಗಾವಿ ಗಡಿ ವಿವಾದವನ್ನು ಬೆಳೆಯಲು ಬಿಟ್ಟು ರಾಜ್ಯ ಸರ್ಕಾರ ಚಂದ ನೋಡುತ್ತಾ ಕೂತಿದೆ’ ಎಂದು ಟೀಕಿಸಿದ್ದಾರೆ.

‘ಬೆಳಗಾವಿ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಂಡಿರುವ ಕಾರಣ ಜನ ಪರದಾಡುವಂತಾಗಿದೆ. ಎರಡೂ ಕಡೆಗಳಲ್ಲಿ ಜನ ಉದ್ರಿಕ್ತರಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಶಾಂತಿ ಕಾಪಾಡಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ADVERTISEMENT

‘ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ವಿರುದ್ಧ ಅಲ್ಲಿನ ಸರ್ಕಾರ ಅತಿರೇಕದ ಕ್ರಮಗಳಿಗೆ ಮುಂದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ರಾಜ್ಯದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಹಾರಾಷ್ಟ್ರದ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡಬೇಕು’ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

‌‘ಡಬಲ್ ಎಂಜಿನ್ ಸರ್ಕಾರ ಎಂದು ಎದೆ ಬಡಿದುಕೊಂಡರೆ ಸಾಲದು. ಆ ಅವಕಾಶವನ್ನು ಬಳಸಿಕೊಂಡು ಎರಡು ರಾಜ್ಯಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರದ ನೆರವನ್ನು ಪಡೆಯಬೇಕು’ ಎಂದು ರಾಜ್ಯ ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.