
ನವದೆಹಲಿ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕಾರ್ಯವೈಖರಿ, ಸಂಘಟನಾ ಚಾತುರ್ಯ ಹೊಗಳಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಬೆನ್ನಲ್ಲೇ, ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
‘140 ವರ್ಷಗಳ ಇತಿಹಾಸ ಹೊಂದಿರುವ ಪಕ್ಷವು ವಿಭಜಕ ಶಕ್ತಿಯೊಂದರಿಂದ ಕಲಿಯುವುದು ಏನೂ ಇಲ್ಲ’ ಎಂದು ಕಾಂಗ್ರೆಸ್ ನಾಯಕರಾದ ಪವನ್ ಖೇರಾ ಹಾಗೂ ಮಾಣಿಕಂ ಟ್ಯಾಗೋರ್ ಕುಟುಕಿದ್ದರೆ, ಹಿರಿಯ ನಾಯಕ ಶಶಿ ತರೂರ್,‘ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ’ ಎಂದು ಹೇಳುವ ಮೂಲಕ ದಿಗ್ವಿಜಯ್ ಸಿಂಗ್ ಅವರ ಮಾತಿಗೆ ದನಿಗೂಡಿಸಿದ್ದಾರೆ.
‘ಆರ್‌ಎಸ್‌ಎಸ್‌ನಿಂದ ಕಾಂಗ್ರೆಸ್ ಪಕ್ಷ ಕಲಿಯುವಂಥದ್ದು ಏನೂ ಇಲ್ಲ. ಅದರಲ್ಲೂ, ಮಹಾತ್ಮ ಗಾಂಧಿ ಅವರಿಂದ ಮರುಸಂಘಟನೆಯಾಗಿರುವ ಪಕ್ಷವು ಆರ್‌ಎಸ್‌ಎಸ್‌ನಿಂದ ಏನು ಕಲಿಯಬೇಕಿದೆ’ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಪ್ರಶ್ನಿಸಿದ್ದಾರೆ.
ಅದರಲ್ಲೂ, ಪಕ್ಷದ ಕಾರ್ಯಕ್ರಮವೊಂದರ ಬಳಿಕ ರಾಹುಲ್ ಗಾಂಧಿ ಅವರು,‘ನಿನ್ನೆ ನೀವು ನಿಮ್ಮ ಕೆಲಸ ಮಾಡಿದಿರಿ’ ಎಂಬುದಾಗಿ ದಿಗ್ವಿಜಯ್ ಸಿಂಗ್ ಉದ್ದೇಶಿಸಿ ಹೇಳಿದ್ದರು. ಇದರ ಬೆನ್ನಲ್ಲೇ ಪಕ್ಷದ ನಾಯಕರು ದಿಗ್ವಿಜಯ್ ಸಿಂಗ್ ಅವರನ್ನು ಕುಟುಕುವಂಥ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ‘ನಿಗೂಢ’ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ನಾಯಕರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಒಂದೆಡೆ, ಪಕ್ಷದ ಸಂಘಟನೆ ಬಲಪಡಿಸುವ ವಿಚಾರವಾಗಿ ವ್ಯಕ್ತವಾದ ಕಳಕಳಿಯನ್ನು ರಾಹುಲ್ ಗಾಂಧಿ ಸಕಾರಾತ್ಮಕವಾಗಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಅರ್‌ಎಸ್‌ಎಸ್‌ನ ಕಾರ್ಯವೈಖರಿ ಹೋಲಿಕೆ ಮಾಡಿದ್ದಕ್ಕಾಗಿ ರಾಹುಲ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಸುಧಾರಣೆಗಳ ಅಗತ್ಯವಿದೆ ಎಂದು ಪ್ರತಿಪಾದಿಸಿ ದಿಗ್ವಿಜಯ್ ಸಿಂಗ್ ಅವರು ವಾರದ ಹಿಂದೆಯಷ್ಟೇ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅದರ ಬೆನ್ನಲ್ಲೇ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಹೊಗಳಿ ಅವರು ಪೋಸ್ಟ್ ಮಾಡಿದ್ದರು.
ಸಿಂಗ್ ಅವರು ತಮ್ಮ ಈ ಪೋಸ್ಟ್ ಅನ್ನು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಖಾತೆಗಳಿಗೆ, ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ‘ಟ್ಯಾಗ್’ ಮಾಡಿದ್ದರು.
ದಿಗ್ವಿಜಯ್ ಸಿಂಗ್ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮತ್ತೊಬ್ಬ ಮುಖಂಡ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಪಕ್ಷದ 140ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತರೂರ್, ದಿಗ್ವಿಜಯ್ ಸಿಂಗ್ ಅವರ ಪಕ್ಕದ ಆಸನದಲ್ಲಿ ಕುಳಿತಿದ್ದರಲ್ಲದೇ, ಅವರೊಂದಿಗೆ ಮಾತುಕತೆಯಲ್ಲಿ ತೊಡಗಿ ಗಮನ ಸೆಳೆದರು.
ಬಳಿಕ, ದಿಗ್ವಿಜಯ್ ಸಿಂಗ್ ಅವರ ಹೇಳಿಕೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಇದರಲ್ಲಿ ಯಾವುದೇ ಸಂಶಯ ಇಲ್ಲ’ ಎಂದು ತರೂರ್ ಪ್ರತಿಕ್ರಿಯಿಸಿದರು.
‘ನೀವು ದಿಗ್ವಿಜಯ್ ಸಿಂಗ್ ಪಕ್ಕದಲ್ಲಿಯೇ ಕುಳಿತಿದ್ದಿರಿ. ಅವರ ಹೇಳಿಕೆ ವಿಚಾರವಾಗಿ ಮಾತುಕತೆ ನಡೆಯಿತೇ’ ಎಂಬ ಮತ್ತೊಂದು ಪ್ರಶ್ನೆಗೆ, ‘ನಾವು ಸ್ನೇಹಿತರು. ಉಭಯಕುಶಲೋಪರಿ ಇದ್ದೇ ಇರುತ್ತದೆ’ ಎಂದು ಉತ್ತರಿಸಿದರು.
‘ಕೈ’ ನಾಯಕರ ಪ್ರತಿಕ್ರಿಯೆಗಳು
ನಮ್ಮ ಪಕ್ಷಕ್ಕೆ 140 ವರ್ಷ ಇತಿಹಾಸವಿದ್ದು ಇದರಿಂದ ನಾವು ಸಾಕಷ್ಟು ಕಲಿಯಬಹುದಾಗಿದೆ. ಸಂಘಟನೆ ಬಲಪಡಿಸುವ ಕುರಿತು ನಮಗೆ ಯಾರೂ ಹೇಳಿಕೊಡಬೇಕಿಲ್ಲ. ಯಾವುದೇ ಪಕ್ಷವಿರಲಿ ಶಿಸ್ತು ಬಹಳ ಮುಖ್ಯಶಶಿ ತರೂರ್
ದ್ವೇಷದ ತಳಹದಿ ಮೇಲೆ ಹಾಗೂ ದ್ವೇಷವನ್ನೇ ಹಬ್ಬಿಸುವ ತತ್ವದ ಮೇಲೆ ಕಟ್ಟಿದ ಸಂಘಟನೆಯೇ ಆರ್‌ಎಸ್‌ಎಸ್. ಅಲ್‌ಕೈದಾ ಕೂಡ ದ್ವೇಷ ಹಬ್ಬಿಸುವ ಸಂಘಟನೆ. ನೀವು ಅಲ್‌ಕೈದಾದಿಂದ ಏನಾದರೂ ಕಲಿಯಬಹುದೇ? ಈ ಸಂಘಟನೆಯಿಂದ ಕಲಿಯಲಿಕ್ಕಾದರೂ ಏನಿದೆ?ಮಾಣಿಕಂ ಟ್ಯಾಗೋರ್
ನಾವು ಆರ್‌ಎಸ್‌ಎಸ್ ಪ್ರತಿಪಾದಿಸುವ ಸಿದ್ಧಾಂತವನ್ನು ವಿರೋಧಿಸುತ್ತೇವೆ. ಹೀಗಾಗಿ ನಾವು ಅವರಿಂದ ಕಲಿಯುವಂಥದ್ದು ಖಂಡಿತವಾಗಿಯೂ ಏನೂ ಇಲ್ಲಸಲ್ಮಾನ್ ಖುರ್ಷೀದ್
ಪಕ್ಷದ ಸಂಘಟನೆ ಕುರಿತು ಕಟು ಟೀಕೆ ಮಾಡಿದ್ದ ದಿಗ್ವಿಜಯ್ ಸಿಂಗ್ ಭಾನುವಾರ ತಮ್ಮ ವರಸೆ ಬದಲಿಸಿದಂತೆ ಕಂಡುಬಂದರು. ‘ಪಕ್ಷವನ್ನು ಜಿಲ್ಲಾ ಮಟ್ಟದಿಂದ ಮರುಸಂಘಟಿಸುವ ಕಾರ್ಯಕ್ಕೆ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ. ಈ ಕಾರ್ಯ ತಳಮಟ್ಟದ ವರೆಗೂ ಹೋಗಲಿದೆ. ಈ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು’ ಎಂದು ಹೇಳಿದರು. ‘ಸಿದ್ಧಾಂತ ವಿಚಾರವಾಗಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಗಾಂಧಿ ಕುಟುಂಬದಲ್ಲಿ ಒಡಕು ಮೂಡಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.