ADVERTISEMENT

ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಿ: ಸೋನಿಯಾ ಗಾಂಧಿಗೆ ನಡ್ಡಾ ಪತ್ರ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬಿಜೆಪಿ ಅಧ್ಯಕ್ಷ ನಡ್ಡಾರಿಂದ ಪತ್ರ

ಪಿಟಿಐ
Published 11 ಮೇ 2021, 8:53 IST
Last Updated 11 ಮೇ 2021, 8:53 IST
ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ   

ನವದಹಲಿ: ಕೋವಿಡ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್‌ ಜನರನ್ನು ದಾರಿ ತಪ್ಪಿಸುತ್ತಿದ್ದು, ಸುಳ್ಳು ಭೀತಿಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರ ನಡವಳಿಕೆ ‘ಇಬ್ಬಗೆಯ ನೀತಿ ಮತ್ತು ಸಣ್ಣತನ‘ದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ನಾಲ್ಕು ಪುಟಗಳ ಪತ್ರ ಬರೆದಿರುವ ನಡ್ಡಾ, ‘ಶತಮಾನದಲ್ಲೊಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗದ ಸಮಯದಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಸೇರಿದಂತೆ ಇತರೆ ನಾಯಕರು ಲಸಿಕೆ ಕುರಿತು ಜನರಲ್ಲಿ ಹಿಂಜರಿಕೆ ಸ್ವಭಾವವನ್ನು ಸೃಷ್ಟಿಸುತ್ತಿದ್ದಾರೆ‘ ಎಂದು ದೂರಿದ್ದಾರೆ.

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಪಿಡುಗಿನ ವಿರುದ್ಧ ಹೋರಾಟ ನಡೆಯುತ್ತಿದೆ. ವಿಜ್ಞಾನದಲ್ಲಿ ಅಚಲವಾದ ನಂಬಿಕೆ, ಹೊಸ ಸಂಶೋಧನೆಗೆ ಬೆಂಬಲ, ಕೋವಿಡ್‌ ಯೋಧರ ಮೇಲಿನ ನಂಬಿಕೆ ಮತ್ತು ಸಹಕಾರಿ ತತ್ವದೊಂದಿಗೆ ಈ ಹೋರಾಟ ಮುಂದುವರಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಈ ಸವಾಲುಗಳು ಎದುರಾಗಿರುವ ಸಮಯದಲ್ಲಿ ಕಾಂಗ್ರೆಸ್ ನಡೆಸಿದ ವರ್ತನೆಯಿಂದ ಬೇಸರವಾಗಿದೆ. ಆದರೆ ಆಶ್ಚರ್ಯವಾಗಿಲ್ಲ‘ ಎಂದು ನಡ್ಡಾ ಹೇಳಿದ್ದಾರೆ.

ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ‘ಮೋದಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು, ತಮ್ಮ ವೈಯಕ್ತಿಕ ಕಾರ್ಯಸೂಚಿಯನ್ನು ಬದಿಗಿಟ್ಟು, ಸುತ್ತಮುತ್ತಲಿನ ಜನರ ನೋವಿಗೆ ಸ್ಪಂದಿಸಬೇಕು. ಜನರ ಸೇವೆಗೆ ಮುಂದಾಗಬೇಕು‘ ಎಂದು ಸೋನಿಯಾ ಸೇರಿದಂತೆ ವಿವಿಧ ಕಾಂಗ್ರೆಸ್‌ ನಾಯಕರು ಒತ್ತಾಯಿಸಿದ್ದರು.

ಎಲ್ಲ ಅಂಶಗಳನ್ನು ಉಲ್ಲೇಖಿಸಿ, ನಡ್ಡಾ ಅವರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.