
ಪ್ರಿಯಾಂಕಾ ಗಾಂಧಿ ವಾದ್ರಾ
(ಪಿಟಿಐ ಚಿತ್ರ)
ಸಹರ್ಸ: 'ದೇಶ ಹಾಗೂ ಬಿಹಾರವನ್ನು ಅವಮಾನಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷದವರನ್ನು ದೂಷಿಸುತ್ತಿದ್ದಾರೆ. ಅಂದ ಹಾಗೆ ಅವರು 'ಅವಮಾನ ಸಚಿವಾಲಯವನ್ನು' ತೆರೆಯಬೇಕು' ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಸೋಮವಾರ) ವಾಗ್ದಾಳಿ ನಡೆಸಿದ್ದಾರೆ.
ಸಹರ್ಸ ಜಿಲ್ಲೆಯ ಸೋನಾಬರ್ಸಾದಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, 'ಪ್ರಧಾನಿ ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಎನ್‌ಡಿಎ ಸರ್ಕಾರದ ಭ್ರಷ್ಟಾಚಾರ ಹಾಗೂ ಆಡಳಿತ ವೈಫ್ಯಲ್ಯದ ಬಗ್ಗೆ ಒಂದೇ ಒಂದು ಮಾತನ್ನು ಆಡುತ್ತಿಲ್ಲ' ಎಂದು ಆರೋಪಿಸಿದ್ದಾರೆ.
'ಚುನಾವಣೆಯ ಸಂದರ್ಭದಲ್ಲಿ ಭರವಸೆಗಳನ್ನು ನೀಡುವ ಮೊದಲು ಕಳೆದ 20 ವರ್ಷಗಳಲ್ಲಿ ಎನ್‌ಡಿಎ ಬಿಹಾರಕ್ಕೆ ಏನನ್ನು ಮಾಡಿದೆ ಎಂಬುದಕ್ಕೆ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮೊದಲು ಉತ್ತರಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
'ಬಿಹಾರದಲ್ಲಿ ಸರ್ಕಾರವನ್ನು ನಿತೀಶ್ ಕುಮಾರ್ ನಡೆಸುತ್ತಿಲ್ಲ. ಬದಲಾಗಿ 'ರಿಮೋಟ್ ಕಂಟ್ರೋಲ್' ಆಗಿ ದೆಹಲಿಯಿಂದ ಪ್ರಧಾನಿ ಹಾಗೂ ಕೇಂದ್ರ ನಾಯಕರು ನಿಯಂತ್ರಿಸುತ್ತಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
'ಬಿಹಾರದ ಎನ್‌ಡಿಎ ಸರ್ಕಾರವು ಸಂವಿಧಾನ ಖಾತ್ರಿಪಡಿಸಿದ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬೆದರಿಕೆ ಒಡ್ಡುತ್ತಿ'ದೆ ಎಂದು ಅವರು ಹೇಳಿದ್ದಾರೆ.
'ರಾಜ್ಯದಲ್ಲಿ ನಿರುದ್ಯೋಗ ಹೆಚ್ಚುತ್ತಿದ್ದು, ಯುವಜನರು ರಾಜ್ಯ ಬಿಟ್ಟು ಹೋಗುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವ ಸಾರ್ವಜನಿಕ ವಲಯಗಳನ್ನು ಬಿಜೆಪಿಯ ಕಾರ್ಪೋರೇಟ್ ಮಿತ್ರರಿಗೆ ನೀಡಲಾಗಿದೆ' ಎಂದು ಅವರು ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.