ADVERTISEMENT

ಅಭಿ ಪಿಕ್ಚರ್ ಬಾಕಿ ಹೈ; ಅಣು ಬಾಂಬ್ ಬೆನ್ನಲ್ಲೇ ಕುತೂಹಲ ಮೂಡಿಸಿದ ರಾಹುಲ್ ಹೇಳಿಕೆ

ಪಿಟಿಐ
Published 12 ಆಗಸ್ಟ್ 2025, 9:12 IST
Last Updated 12 ಆಗಸ್ಟ್ 2025, 9:12 IST
   

ನವದೆಹಲಿ: ಚುನಾವಣಾ ಆಯೋಗವು ‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವನ್ನು ಜಾರಿಗೊಳಿಸುವ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.

ಸಂಸತ್‌ ಆವರಣದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮತದಾರರ ಪಟ್ಟಿಯಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಕೆಲಸ ಮುಂದುವರಿಯಲಿದೆ. ‘ಅಭಿ ಪಿಕ್ಚರ್‌ ಬಾಕಿ ಹೈ’ ಎಂದಿದ್ದಾರೆ.

‘ಕೇವಲ ಒಂದು ಕ್ಷೇತ್ರದಲ್ಲಿ ‘ವೋಟ್‌ ಚೋರಿ’ (ಮತ ಕಳವು) ನಡೆದಿಲ್ಲ. ಇತರ ಹಲವು ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ. ಈ ಕೆಲಸವನ್ನು ರಾಷ್ಟ್ರಮಟ್ಟದಲ್ಲಿ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಅಕ್ರಮ ನಡೆದಿರುವುದು ಚುನಾವಣಾ ಆಯೋಗಕ್ಕೆ ತಿಳಿದಿದೆ. ನಮಗೂ ತಿಳಿದಿದೆ’ ಎಂದು ಹೇಳಿದರು.

ADVERTISEMENT

‘ಮೊದಲು, ನಮ್ಮ ಬಳಿ ಪುರಾವೆಗಳು ಇರಲಿಲ್ಲ. ಆದರೆ ಈಗ ಸಾಕಷ್ಟು ಪುರಾವೆಗಳಿವೆ. ನಾವು ಸಂವಿಧಾನವನ್ನು ರಕ್ಷಿಸುತ್ತೇವೆ. ‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವು ಸಂವಿಧಾನದ ಅಡಿಪಾಯವಾಗಿದೆ’ ಎಂದರು. 

ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಬಿಹಾರದ ಮತದಾರರ ಕರಡು ಪಟ್ಟಿಯಲ್ಲಿ 124 ವರ್ಷದ ಮಹಿಳೆ ಮಿಂತಾ ದೇವಿ ಎಂಬವರ ಹೆಸರು ಇರುವ ಬಗ್ಗೆ ಮಾಧ್ಯಮದವರು ಕೇಳಿದಾಗ, ‘ಅಂತಹ ಹಲವು ಪ್ರಕರಣಗಳಿವೆ. ಅಭಿ ಪಿಕ್ಚರ್ ಬಾಕಿ ಹೈ’ ಎಂದು ಪ್ರತಿಕ್ರಿಯಿಸಿದರು.

ರಾಹುಲ್‌ ಹೇಳಿಕೆಗೆ ದನಿಗೂಡಿಸಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ಮತದಾರರ ಪಟ್ಟಿಯಲ್ಲಿ ಇದೇ ರೀತಿ ನಕಲಿ ವಿಳಾಸ ಮತ್ತು ಹೆಸರು ಇರುವ ಹಲವು ಪ್ರಕರಣಗಳು ಇವೆ’ ಎಂದು ಆರೋಪಿಸಿದರು.

ಪ್ರತಿಭಟನೆ:

ಮತ ಕಳವು ಹಾಗೂ ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರೋಧಿಸಿ ‘ಇಂಡಿಯಾ’ ಮೈತ್ರಿಕೂಟದ ಹಲವು ಸಂಸದರು ಸಂಸತ್‌ ಭವನದ ಆವರಣದಲ್ಲಿ ಮಂಗಳವಾರ ಕೂಡಾ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.