ರಾಹುಲ್ ಗಾಂಧಿ
(ಪಿಟಿಐ ಚಿತ್ರ)
ರಾಯ್‌ಬರೇಲಿ(ಉತ್ತರ ಪ್ರದೇಶ): 'ವೋಟ್ ಚೋರ್, ಗದ್ದಿ ಚೋಡ್' ಘೋಷಣೆಗೆ ದೇಶದಾದ್ಯಂತ ಭಾರಿ ಮನ್ನಣೆ ದೊರಕಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಬುಧವಾರ) ಹೇಳಿದ್ದಾರೆ.
ರಾಹುಲ್ ನೇತೃತ್ವದಲ್ಲಿ ಬಿಹಾರದಲ್ಲಿ ಇತ್ತೀಚೆಗಷ್ಟೇ ಹಮ್ಮಿಕೊಂಡಿದ್ದ 'ಮತದಾರರ ಅಧಿಕಾರ ಯಾತ್ರೆ'ಯಲ್ಲಿ 'ವೋಟ್ ಚೋರ್, ಗದ್ದಿ ಚೋಡ್' (ಮತಕಳ್ಳರೇ, ಗದ್ದುಗೆ ಬಿಡಿ) ಘೋಷಣೆ ಕೂಗಲಾಗಿತ್ತು.
ಸ್ವಕ್ಷೇತ್ರ ರಾಯ್‌ಬರೇಲಿಗೆ ಎರಡು ದಿನಗಳ ಭೇಟಿ ಕೊಟ್ಟಿರುವ ರಾಹುಲ್, 'ವೋಟ್ ಚೋರ್, ಗದ್ದಿ ಚೋಡ್' ದೇಶದಾದ್ಯಂತ ಸಾಬೀತುಗೊಂಡಿದೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜನರ ಬಳಿಗೆ ತೆಗೆದುಕೊಂಡು ಹೋಗಲಿದ್ದೇವೆ ಎಂದು ಹೇಳಿದ್ದಾರೆ.
'ಲೋಕಸಭೆ ಚುನಾವಣೆಯ ವೇಳೆ ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷ ಹಾಗೂ ಮೈತ್ರಿಕೂಟ ಗೆಲುವು ದಾಖಲಿಸಿತ್ತು. ಅದಾದ ನಾಲ್ಕು ತಿಂಗಳಲ್ಲೇ ವಿಧಾನಸಭೆಯಲ್ಲಿ ಪರಾಭವಗೊಂಡಿತ್ತು. ನಾವು ಪರಿಶೀಲಿಸಿದಾಗ ಲೋಕಸಭೆ ಚುನಾವಣೆಯ ನಂತರ ಸುಮಾರು ಒಂದು ಕೋಟಿ ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು ಎಂಬುದು ತಿಳಿದು ಬಂದಿತ್ತು. ಈ ಮತಗಳೆಲ್ಲವೂ ಬಿಜೆಪಿಗೆ ಹೋದವು. ನಮ್ಮ ಹಾಗೂ ಮೈತ್ರಿ ಪಕ್ಷದ ಮತಗಳೆಲ್ಲ ಅಷ್ಟೇ ಇತ್ತು' ಎಂದು ರಾಹುಲ್ ಆರೋಪಿಸಿದ್ದಾರೆ.
'ಈ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿದಾಗ ಯಾವುದೇ ಉತ್ತರ ದೊರಕಲಿಲ್ಲ. ವಿಡಿಯೊ ಪುರಾವೆಯನ್ನು ಒದಗಿಸಲಿಲ್ಲ' ಎಂದು ರಾಹುಲ್ ಹೇಳಿದ್ದಾರೆ.
'ಕರ್ನಾಟಕದಲ್ಲೂ ಮತಕಳ್ಳತನ ನಡೆದಿದೆ. ಇದೇ ರೀತಿ ಉತ್ತರ ಪ್ರದೇಶ, ಹರಿಯಾಣ, ಮಧ್ಯ ಪ್ರದೇಶ ಮತ್ತು ಗುಜರಾತಿನಲ್ಲೂ ಭಾರಿ ಪ್ರಮಾಣದಲ್ಲಿ ಮತಕಳ್ಳತನ ನಡೆದಿದೆ. ಈ ಕುರಿತ ಎಲ್ಲ ದಾಖಲೆಗಳನ್ನು ಕ್ರಮೇಣ ಬಿಡುಗಡೆ ಮಾಡುತ್ತೇವೆ' ಎಂದು ರಾಹುಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.