ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಸಂಸತ್ತಿನ ಅಧಿವೇಶನದ ಹಾಜರಾತಿಯಿಂದ ಪ್ರಧಾನಿ ಹಾಗೂ ಸಚಿವರಿಗೆ ವಿನಾಯಿತಿ ನೀಡಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.
ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಲ್ಟಿ ಮೀಡಿಯಾ ಡಿವೈಸ್ (ಬಹು ಮಾಧ್ಯಮ ಸಾಧನ) ಆಧಾರಿತ ಹಾಜರಾತಿ ವ್ಯವಸ್ಥೆ ಪರಿಚಯಿಸುತ್ತಿರುವುದನ್ನು ಟೀಕಿಸಿದೆ.
ನೂತನ ಹಾಜರಾತಿ ವ್ಯವಸ್ಥೆಯು ‘ದೋಷಪೂರಿತ’ವಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಚೇತಕರಾಗಿರುವ ಮಣಿಕ್ಕಂ ಟ್ಯಾಗೋರ್ ದೂರಿದ್ದಾರೆ.
ಹೊಸ ಪದ್ಧತಿಯು ಸಂಸದರ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಗುರಿ ಹೊಂದಿರುವಾಗ, ಪ್ರಧಾನಿ ಮತ್ತು ಸಚಿವರಿಗೆ ಏಕೆ ವಿನಾಯಿತಿ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೆಲವು ಸಂಸದರು ಹಾಜರಾತಿ ಹಾಕಿ, ಸದನದ ಪ್ರಕ್ರಿಯೆಗಳಲ್ಲಿ ಭಾಗವಹಿಸದೆ ಹೊರಹೋಗುವುದು ಇದೆ ಎಂದಿದ್ದಾರೆ.
‘ದೋಷಪೂರಿತ ವ್ಯವಸ್ಥೆಯನ್ನು ಏಕೆ ಪುನರಾವರ್ತಿಸಬೇಕು’ ಎಂದು ಎಕ್ಸ್‌ನಲ್ಲಿ ಪ್ರಶ್ನಿಸಿರುವ ಮಣಿಕ್ಕಂ, ‘ಲೋಕಸಭೆಯನ್ನು ಪ್ರಧಾನಿ ಮುನ್ನಡೆಸಬೇಕಲ್ಲವೇ? ಆದರೆ ಅವರು ಎಷ್ಟು ದಿನ ಭಾಗಿಯಾಗುತ್ತಾರೆ. 18ರಿಂದ 28 ದಿನ ಅಧಿವೇಶನ ನಡೆದರೆ, ಕೇವಲ ಮೂರರಿಂದ ನಾಲ್ಕು ದಿನವಷ್ಟೇ ಭಾಗಿಯಾಗುತ್ತಾರೆ’ ಎಂದು ಉಲ್ಲೇಖಿಸಿದ್ದಾರೆ.
‘ಹಾಜರಾತಿಯ ಡಿಜಿಟಲೀಕರಿಣದ ಬದಲು ಸುಧಾರಣೆಯ ಅಗತ್ಯವಿದೆ. ಎಲ್ಲರಿಗೂ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕಿದೆ. ಸದನದಲ್ಲಿ ಮಾತನಾಡುವುದು ಹಾಗೂ ಮತದಾನ ಪ್ರಕ್ರಿಯೆಯು ದಾಖಲೆಗಳಾಗಿ ಸ್ವಯಂ ಪ್ರಕಟಣೆಗೊಳ್ಳಬೇಕಿದೆ’ ಎಂದಿದ್ದಾರೆ.
ಸಮಯ ಉಳಿತಾಯ: ನೂತನ ಹಾಜರಾತಿ ವ್ಯವಸ್ಥೆಯಲ್ಲಿ ಸಂಸದರು ಸಂಸತ್ತಿನ ಮೊಗಸಾಲೆಯಲ್ಲಿ ಸಹಿ ಮಾಡಲು ಬದಲು, ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಕುಳಿತು ಬಹು ಮಾಧ್ಯಮ ಸಾಧನದ ಮೂಲಕ ಪಂಚ್ ಮಾಡಬೇಕಿದೆ.
ಕೆಲವೊಮ್ಮೆ ಸಂಸದರಿಂದ ಮೊಗಸಾಲೆ ಕಿಕ್ಕಿರಿದು ತುಂಬಿದ್ದಾಗ, ಸಮಯ ಉಳಿಸಲು ಈ ವ್ಯವಸ್ಥೆ ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.