ADVERTISEMENT

ಭಾರತೀಯ ಯೋಧರ ಹತ್ಯೆ ತೀವ್ರ ಆಘಾತಕಾರಿ: ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2020, 16:17 IST
Last Updated 16 ಜೂನ್ 2020, 16:17 IST
ರಣದೀಪ್ ಸಿಂಗ್ ಸುರ್ಜೇವಾಲಾ (ಸಂಗ್ರಹ ಚಿತ್ರ)
ರಣದೀಪ್ ಸಿಂಗ್ ಸುರ್ಜೇವಾಲಾ (ಸಂಗ್ರಹ ಚಿತ್ರ)   

ನವದೆಹಲಿ: ಚೀನಾ ಪಡೆಗಳು ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿರುವುದಕ್ಕೆ ಕಾಂಗ್ರೆಸ್ ತೀವ್ರ ಆಘಾತ ವ್ಯಕ್ತಪಡಿಸಿದೆ. ಜತೆಗೆ, ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ.

ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೌನವಾಗಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್, ತಕ್ಷಣವೇ ಗಡಿ ವಿಚಾರಕ್ಕೆ ಸಂಬಂಧಿಸಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದೆ.

‘2020ರ ಏಪ್ರಿ–ಮೇ ಬಳಿಕ ಚೀನಾ ಸೇನಾಪಡೆಗಳು ನಮ್ಮ ಎಷ್ಟು ಭೂಭಾಗವನ್ನು ಅತಿಕ್ರಮಿಸಿಕೊಂಡಿವೆ, ನಮ್ಮ ಕೆಚ್ಚೆದೆಯ ಯೋಧರನ್ನು ಚೀನಾ ಪಡೆಗಳು ಹತ್ಯೆ ಮಾಡಲು ಏನು ಕಾರಣ ಎಂಬುದನ್ನು ಪ್ರಧಾನಿ ಮತ್ತು ರಕ್ಷಣಾ ಸಚಿವರು ಈಗಲಾದರೂ ದೇಶದ ಜನತೆಗೆ ಉತ್ತರಿಸಬಲ್ಲರೇ’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಪರವಾಗಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಇದು ಕಠಿಣ ಕ್ರಮ ಕೈಗೊಳ್ಳಬೇಕಾದ ಸಮಯ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹ ಮಧ್ಯಾಹ್ ಟ್ವೀಟ್ ಮಾಡಿದ್ದರು.

ಯೋಧರ ಹತ್ಯೆ ಗಂಭೀರ ವಿಚಾರ ಎಂದು ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಸಹ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.