ADVERTISEMENT

ಲಡಾಖ್‌‌: ಮಾತುಕತೆಗಳ ಕುರಿತು ಭಾರತ-ಚೀನಾ ಜಂಟಿ ಹೇಳಿಕೆ ಅಗತ್ಯ ಎಂದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2020, 15:19 IST
Last Updated 13 ನವೆಂಬರ್ 2020, 15:19 IST
ಚಿದಂಬರಂ
ಚಿದಂಬರಂ    

ನವದೆಹಲಿ: ಲಡಾಖ್‌ನಲ್ಲಿ ಉದ್ವಿಗ್ನತೆ ಶಮನಕ್ಕೆ ಸಂಬಂಧಿಸಿದಂತೆ ನೀಡಲಾಗುವ ಭಾರತದ ಹೇಳಿಕೆ ಮತ್ತು ಚೀನಾದ ಪ್ರತಿಹೇಳಿಕೆ, ನಿರಾಕರಣೆಗಳನ್ನು ಟೀಕಿಸಿರುವ ಕಾಂಗ್ರೆಸ್‌, ಇದೊಂದು ಕ್ರೂರ ವ್ಯಂಗ್ಯ ಎಂದು ಹೇಳಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ, ಲಡಾಖ್‌ನ ಕೆಲವು ಭಾಗಗಳಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ ಮಾಡಿರುವ ಉಲ್ಲಂಘನೆಗೆ ಸಂಬಂಧಿಸಿದಂತೆ, ಚೀನಾದೊಂದಿಗೆ ಭಾರತ ನಡೆಸಿರುವ ಅಂತ್ಯವಿಲ್ಲದ ಮಾತುಕತೆ ಮತ್ತು ಅತಿ ಎತ್ತರದ ಹಿಮಾಚ್ಚಾದಿತ ಪ್ರದೇಶದಿಂದ ಸೇನೆಗಳ ಹಿಂತೆಗೆತದ ಕುರಿತು ಮೋದಿ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ.

ಗಡಿಯಲ್ಲಿ ಸೇನೆಗಳ ಹಿಂತೆಗೆತ ಎಂಬುದು 'ನಿಖರವಲ್ಲದ' ಮಾಹಿತಿ ಎಂದು ಚೀನಾದ ಮುಖವಾಣಿ, ಗ್ಲೋಬಲ್‌ ಟೈಮ್ಸ್‌ ಇತ್ತೀಚೆಗೆ ವರದಿ ಮಾಡಿದೆ.

ADVERTISEMENT

ಗಡಿ ಉದ್ವಿಗ್ನತೆ ಶಮನಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆಯ ಯಾವುದೇ ಒಪ್ಪಂದವಾಗಿದ್ದರೆ, ಭಾರತವು ಜಂಟಿ ಹೇಳಿಕೆಗೆ ಒತ್ತಾಯಿಸಬೇಕು. ಈ ಮೂಲಕ ಮಾತ್ರ ಹೇಳಿಕೆ-ಪ್ರತಿ ಹೇಳಿಕೆ, ನಿರಾಕರಣೆಗಳ ಕ್ರೂರ ವ್ಯಂಗ್ಯವನ್ನು ಕೊನೆಗಾಣಿಸಲು ಸಾಧ್ಯ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಚೀನಾ ತಾನು ಆಕ್ರಮಿಸಿಕೊಂಡಿರುವ ಜಾಗದಲ್ಲಿ ನೆಲೆಯೂರಿದೆ ಎಂಬುದು ವಾಸ್ತವ ಎಂದೂ ಮಾಜಿ ಗೃಹ ಸಚಿವ ಚಿದಂಬರಂ ಹೇಳಿದ್ದಾರೆ.

'ಗಡಿಗೆ ಸಂಬಂಧಿಸಿದಂತೆ ಚೀನಾದೊಂದಿಗೆ ನಡೆಯುತ್ತಿರುವ ಅಂತ್ಯವಿಲ್ಲದ ಮಾತುಕತೆಗಳು ಏನು ಎಂಬುದನ್ನು ಸರ್ಕಾರ ದೇಶದ ಜನರ ಎದುರು ಬಿಚ್ಚಿಡಬೇಕು. ಗಡಿಯಲ್ಲಿನ ಉದ್ವಿಗ್ನತೆ ಶಮನಕ್ಕೆ ಒಪ್ಪಂದವಾಗಿದೆ ಎಂದು ಪ್ರತಿ ಬಾರಿ ಭಾರತ ಹೇಳಿಕೊಳ್ಳುತ್ತದೆ. ಆದರೆ, ಅದನ್ನು ಚೀನಾ ನಿರಾಕರಿಸುತ್ತದೆ,' ಎಂದು ಸರ್ಕಾರದ ವಿರುದ್ಧ ಚಿದಂಬರಂ ಕಿಡಿ ಕಾರಿದ್ದಾರೆ.

ಪೂರ್ವ ಲಡಾಖ್ ಗಡಿಯಲ್ಲಿ ಎರಡೂ ರಾಷ್ಟ್ರಗಳು ಸೇನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸುವುದರೊಂದಿಗೆ, ಭಾರತ ಮತ್ತು ಚೀನಾ ನಡುವೆ ಮೇ ತಿಂಗಳಿನಿಂದಲೂ ಯುದ್ಧ ಸನ್ನದ್ಧ ಸ್ಥಿತಿ ಉದ್ಭವಿಸಿದೆ.

ಉದ್ವಿಗ್ನತೆ ಕೊನೆಗಾಣಿಸಲು ಈ ವರೆಗೆ ಮಿಲಿಟರಿ ಹಂತದಲ್ಲಿ ಎಂಟು ಹಂತಗಳ ಮಾತುಕತೆ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.