
ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್
–ಪಿಟಿಐ ಚಿತ್ರ
ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ‘ಆತ್ಮ ನಿರ್ಭರ’ದ (ಸ್ವಾವಲಂಬಿ) ಬದಲಿಗೆ ‘ಅಮೆರಿಕ ನಿರ್ಭರ’ (ಅಮೆರಿಕ ಅವಲಂಬಿತ) ಮಾಡಿದೆ. ಇದು ರೈತರ ಜೀವನೋಪಾಯದ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ಬಲವಂತದಿಂದ ಏರ್ಪಟ್ಟಿದೆಯೇ?, ಇದು ದೇಶದ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರುವುದರ ಜತೆಗೆ ವ್ಯಾಪಾರದಲ್ಲಿ ಅಸಮತೋಲನವನ್ನು ಸೃಷ್ಟಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ದೂರಿದ್ದಾರೆ.
ಈ ಒಪ್ಪಂದವು ಸೋಯಾಬೀನ್ ಎಣ್ಣೆ, ಮೆಕ್ಕೆಜೋಳ, ಸೋರ್ಗಮ್ (ಸಿಹಿ ಜೋಳ) ಸೇರಿದಂತೆ ಅಮೆರಿಕದ ಕೃಷಿ ಮತ್ತು ಆಹಾರ ಉತ್ಪನ್ನಗಳ ಆಮದನ್ನು ಅನುಮತಿಸುವ ಮೂಲಕ ರೈತರ ಜೀವನ ಮತ್ತು ಜೀವನೋಪಾಯದ ಮೇಲೆ ನಡೆಸುವಂತಹ ನೇರ ದಾಳಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
‘ನಮ್ಮದು ಸದೃಢ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿ ನಾಯಕರು ದೇಶದ ಹಿತಾಸಕ್ತಿಯನ್ನು ರಕ್ಷಿಸುವ ಬದಲು, ದೇಶದ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯವನ್ನು ಬಿಟ್ಟುಕೊಟ್ಟಿದೆ. ಇದು ಸದೃಢ ಸರ್ಕಾರವೇ ಅಥವಾ ಅಸಹಾಯಕ ಸರ್ಕಾರವೇ?, ಇದು ‘ಆತ್ಮ ನಿರ್ಭರ’ ಭಾರತವೇ ಅಥವಾ ‘ಅಮೇರಿಕ ನಿರ್ಭರ ಭಾರತವೇ?’ ಎಂದು ಜನರು ಪ್ರಶ್ನಿಸುವಂತಾಗಿದೆ ಎಂದು ಸುರ್ಜೇವಾಲಾ ಗುಡುಗಿದ್ದಾರೆ.
‘ಸುಂಕ ರಹಿತ ಅಡೆತಡೆಗಳನ್ನು ತೆಗೆದು ಹಾಕಲು ಒಪ್ಪಿಗೆ ಸೂಚಿಸುವ ಮೂಲಕ ಕೇಂದ್ರ ಸರ್ಕಾರವು ರೈತರಿಗೆ ನೀಡುವ ಸಬ್ಸಿಡಿಗಳನ್ನು ತೆಗೆದುಹಾಕಲು ಒಪ್ಪಿಕೊಂಡಿದೆ. 2025ರಲ್ಲಿ ಅಮೆರಿಕವು ರೈತರಿಗೆ ₹1.45 ಲಕ್ಷ ಕೋಟಿ ಸಬ್ಸಿಡಿಗಳನ್ನು ನೀಡಿತ್ತು. ಇದಕ್ಕೆ ಪ್ರತಿಯಾಗಿ ನಮ್ಮ ದೇಶದಲ್ಲಿ ಬಿಜೆಪಿ ಸರ್ಕಾರ ರೈತರಿಗೆ ವರ್ಷಕ್ಕೆ ಕೇವಲ ₹6,000 ನೀಡುತ್ತಿದೆ. ಆದರೆ, ದುಬಾರಿ ಬೆಲೆಯ ಡೀಸೆಲ್, ರಸಗೊಬ್ಬರ, ವಿದ್ಯುತ್ ಮತ್ತು ಕೀಟನಾಶಕಗಳ ಮೂಲಕ ಹೆಚ್ಚಿನದನ್ನು ವಸೂಲಿ ಮಾಡುತ್ತಿದೆ’ ಎಂದು ಅವರು ಕುಟುಕಿದ್ದಾರೆ.
ವ್ಯಾಪಾರ ಒಪ್ಪಂದದ ಮೂಲಕ ರೈತರಿಗೆ ನೀಡಲಾಗುವ ಉಳಿದ ಪ್ರಯೋಜನಗಳನ್ನು ಸಹ ಕಸಿದುಕೊಳ್ಳಲಾಗುತ್ತಿದೆ. ಈ ನಿರ್ಧಾರವು ಇಡೀ ರೈತ ಸಮುದಾಯಕ್ಕೆ ಅತ್ಯಂತ ಅಪಾಯಕಾರಿ ಎಂದಿದ್ದಾರೆ.
‘ವಾರ್ಷಿಕವಾಗಿ 42.5 ಕೋಟಿ ಟನ್ ಮೆಕ್ಕೆಜೋಳ ಉತ್ಪಾದಿಸುವ ಅಮೆರಿಕಕ್ಕೆ ಹೆಚ್ಚುವರಿ ಮೆಕ್ಕೆಜೋಳವನ್ನು ಮಾರಾಟ ಮಾಡಲು ಮಾರುಕಟ್ಟೆಯ ಅಗತ್ಯವಿದೆ. ಆದರೆ, ಭಾರತ 430 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದಿಸುತ್ತದೆ. ಅಮೆರಿಕದಿಂದ ಮೆಕ್ಕೆಜೋಳವನ್ನು ಆಮದು ಮಾಡಿಕೊಳ್ಳುವುದರಿಂದ ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ತೆಲಂಗಾಣ ಮತ್ತು ಗುಜರಾತ್ ರೈತರಿಗೆ ತೊಂದರೆಯಾಗಲಿದೆ ಎಂದು ಅವರು ವಿವರಿಸಿದ್ದಾರೆ.
‘ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿ 52 ಲಕ್ಷ ಟನ್ ಸಿಹಿ ಜೋಳ (ಸ್ವೀಟ್ ಸೋರ್ಗಮ್) ಬೆಳೆಯಲಾಗುತ್ತದೆ. ಆದರೆ, ಅಮೆರಿಕವು 87 ಲಕ್ಷ ಟನ್ ಉತ್ಪಾದಿಸುತ್ತದೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಸುಂಕ ರಹಿತವಾಗಿ ಅಮೆರಿಕದಿಂದ ಸೋರ್ಗಮ್ ಅನ್ನು ಆಮದು ಮಾಡಿಕೊಂಡರೆ, ನಮ್ಮ ದೇಶದ ರೈತರ ಗತಿ ಏನಾಗಬೇಕು. ಸೋಯಾಬೀನ್ ಎಣ್ಣೆಯ ವಿಷಯದಲ್ಲೂ ಇದೇ ಆಗಿದೆ’ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಲ್ಲಿ ಸ್ಥಳೀಯ ಬೀಜಗಳ ಶುದ್ಧತೆ, ಜೀವವೈವಿಧ್ಯತೆ ಮತ್ತು ಎರಡು ಲಕ್ಷಕ್ಕೂ ಹೆಚ್ಚು ಸ್ಥಳೀಯ ಪ್ರಭೇದಗಳು ನಾಶವಾಗುತ್ತವೆ ಎಂದಿದ್ದಾರೆ.
ರಷ್ಯಾದ ತೈಲ ಖರೀದಿಸದಂತೆ ಭಾರತದ ಮೇಲೆ ಅಮೆರಿಕದ ಒತ್ತಡವನ್ನು ಟೀಕಿಸಿದ ಅವರು, ‘ಇದು ಭಾರತದ ಸಾರ್ವಭೌಮತ್ವ ಮತ್ತು ಸ್ವಾವಲಂಬನೆಯ ನೇರ ರಾಜಿ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.