ಪ್ರಧಾನಿ ನರೇಂದ್ರ ಮೋದಿ
ಕೃಪೆ: ಪಿಟಿಐ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಅನ್ನು ಹೊಗಳಿರುವುದು ಸಾಂವಿಧಾನಿಕ ಮತ್ತು ಜಾತ್ಯತೀತ ಗಣತಂತ್ರ ವ್ಯವಸ್ಥೆಗೆ ತೋರಿದ ಅಗೌರವವಾಗಿದೆ. ಸಂಘವನ್ನು ಓಲೈಸುವ ಸಲುವಾಗಿ ಇಂತಹ ಹತಾಶ ಪ್ರಯತ್ನ ಮಾಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
79ನೇ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಮೋದಿ, ದೇಶವನ್ನುದ್ದೇಶಿಸಿ 103 ನಿಮಿಷ ಭಾಷಣ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಆತ್ಮನಿರ್ಭರ ಭಾರತ, ವಿಕಸಿತ ಭಾರತದ ಕುರಿತು ಪದೇ ಪದೇ ಹೇಳಿದ ಪ್ರಧಾನಿಯ ಮಾತುಗಳು 'ಹಳಸಿದ, ಬೂಟಾಟಿಕೆಯಿಂದ ಕೂಡಿದ, ಅರ್ಥಹೀನವಾಗಿದ್ದವು' ಎಂದಿದ್ದಾರೆ. ಹಾಗೆಯೇ, 'ಪ್ರಧಾನಿ ಅವರು ಇಂದು ಸಾಕಷ್ಟು ಬಳಲಿದ್ದಾರೆ. ಶೀಘ್ರದಲ್ಲೇ ನಿವೃತ್ತಿಯಾಗಲಿದ್ದಾರೆ' ಎಂದು ಕುಟುಕಿದ್ದಾರೆ.
'ಪ್ರಧಾನಿಯವರ ಭಾಷಣದ ಅತ್ಯಂತ ಕಠಿಣವಾದ ಅಂಶವೆಂದರೆ, ಕೆಂಪುಕೋಟೆಯಿಂದ ಆರ್‌ಎಸ್‌ಎಸ್ ಹೆಸರನ್ನು ಉಲ್ಲೇಖಿಸಿದ್ದು. ಇದು, ಸಾಂವಿಧಾನಿಕ ಮತ್ತು ಜಾತ್ಯತೀತ ಗಣತಂತ್ರದ ಮನೋಭಾವದ ಸ್ಪಷ್ಟ ಉಲ್ಲಂಘನೆಯಾಗಿದೆ. ಮುಂದಿನ ತಿಂಗಳು ತಮ್ಮ 75ನೇ ಹುಟ್ಟುಹಬ್ಬ ಬರಲಿರುವುದರಿಂದ, ಅದಕ್ಕೂ ಮೊದಲು ಸಂಘವನ್ನು ಓಲೈಸುವ ಹತಾಶ ಪ್ರಯತ್ನ ನಡೆಸಿದ್ದಾರೆಯೇ ಹೊರತು ಬೇರೇನೂ ಅಲ್ಲ' ಎಂದು ಟೀಕಿಸಿದ್ದಾರೆ.
75 ವರ್ಷ ಪೂರೈಸಿದ ನಾಯಕರು ಕಿರಿಯರಿಗೆ ಅವಕಾಶಗಳನ್ನು ಬಿಟ್ಟುಕೊಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಮೋದಿ ಅವರನ್ನು ಗುರಿಯಾಗಿಸಿಯೇ ಈ ಹೇಳಿಕೆ ನೀಡಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಅದೇ ಹಿನ್ನೆಲೆಯಲ್ಲಿ ಇದೀಗ ಜೈರಾಮ್ ರಮೇಶ್ ಕೂಡ ಟೀಕೆ ಮಾಡಿದ್ದಾರೆ.
'2024ರ ಜೂನ್ 4ರ (ಸಾರ್ವತ್ರಿಕ ಚುನಾವಣಾ ಫಲಿತಾಂಶ) ಬಳಿಕ ನಿರ್ಣಾಯಕವಾಗಿ ದುರ್ಬಲಗೊಂಡಿರುವ ಮೋದಿ, ಇದೀಗ ಸಂಪೂರ್ಣವಾಗಿ ಆರ್‌ಎಸ್‌ಎಸ್ ಕೃಪಾಕಟಾಕ್ಷದಲ್ಲಿದ್ದಾರೆ. ಸೆಪ್ಟೆಂಬರ್ ನಂತರ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಿಕೊಳ್ಳಲು ಮೋಹನ್ ಭಾಗವತ್ ಅವರ ಕಚೇರಿಯನ್ನು ಆಶ್ರಯಿಸಿದ್ದಾರೆ. ವೈಯಕ್ತಿಕ ಹಾಗೂ ಸಾಂಸ್ಥಿಕ ಲಾಭಕ್ಕಾಗಿ ದೇಶದ ಸ್ವಾತಂತ್ರ್ಯೋತ್ಸವವನ್ನು ರಾಜಕೀಯಗೊಳಿಸುವುದು ಪ್ರಜಾಪ್ರಭುತ್ವದ ಪಾಲಿಗೆ ವಿನಾಶಕಾರಿ' ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.