ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಐದು ತಾಸಿಗೂ ಕಡಿಮೆ ಅವಧಿ ಭೇಟಿ ನೀಡಿರುವುದನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಟೀಕಿಸಿದೆ.
‘ಇದು ದುರಂತದಲ್ಲಿ ಗಾಯಗೊಂಡವರಿಗೆ ಮಾಡಿದ ಅವಮಾನವಾಗಿದ್ದು, ಪ್ರಧಾನಿ ಪ್ರವಾಸವೂ ಕಾಟಾಚಾರದಿಂದ ಕೂಡಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
‘2022ರ ಜನವರಿಯಲ್ಲಿ ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಮೋದಿ ಅಲ್ಲಿಗೆ ಈ ಹಿಂದೆ ತೆರಳಿದ್ದರು’ ಎಂದು ಖರ್ಗೆ ಈ ವೇಳೆ ನೆನಪಿಸಿದ್ದಾರೆ.
‘ಮಣಿಪುರವು 864 ದಿನಗಳಿಂದ ಹಿಂಸೆಗೆ ಸಾಕ್ಷಿಯಾಗಿದೆ. ಇದುವರೆಗೆ 300 ಮಂದಿ ಪ್ರಾಣ ಕಳೆದುಕೊಂಡಿದ್ದು, 1,500 ಮಂದಿ ಗಾಯಗೊಂಡಿದ್ದಾರೆ. 60 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. 2023ರ ಮೇ ತಿಂಗಳಲ್ಲಿ ಹಿಂಸಾಚಾರ ಆರಂಭಗೊಂಡ ಬಳಿಕ ಮೋದಿ ಅವರು 43 ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಆದರೆ, ತನ್ನದೇ ಜನರಿಗೆ ಅನುಕಂಪ ವ್ಯಕ್ತಪಡಿಸಿ, ಎರಡು ಮಾತನಾಡಲು ಮಣಿಪುರಕ್ಕೆ ಭೇಟಿ ನೀಡಿರಲಿಲ್ಲ’ ಎಂದು ಅವರು ಟೀಕಿಸಿದ್ದಾರೆ.
‘ನಿಮ್ಮ ಮೂರು ತಾಸುಗಳ ಮಣಿಪುರ ಪ್ರಯಾಣವು ಅಲ್ಲಿನ ಜನರಿಗೆ ನೀಡುವ ಸಹಾನುಭೂತಿ ಅಲ್ಲ; ಕಾಟಾಚಾರದ ಪ್ರವಾಸವು ಗಾಯಗೊಂಡ ಜನರಿಗೆ ಮಾಡುವ ಅವಮಾನವಾಗಿದೆ’ ಎಂದು ಖರ್ಗೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.