ADVERTISEMENT

ಅಗ್ನಿಪಥ ಯೋಜನೆಗೆ ವಿರೋಧ: ರಾಜಸ್ಥಾನದಲ್ಲಿ ಜೂನ್ 27ರಂದು ಕಾಂಗ್ರೆಸ್ ಪ್ರತಿಭಟನೆ

ಪಿಟಿಐ
Published 23 ಜೂನ್ 2022, 10:34 IST
Last Updated 23 ಜೂನ್ 2022, 10:34 IST
   

ಜೈಪುರ: ಸೇನಾ ನೇಮಕಾತಿಯ ಹೊಸ ಯೋಜನೆ 'ಅಗ್ನಿಪಥ' ವಿರೋಧಿಸಿ ರಾಜಸ್ಥಾನದಾದ್ಯಂತ ಜೂನ್‌ 27ರಂದು ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನ ಯುವಕರನ್ನು ಸೇನೆಯ ಮೂರೂ ಪಡೆಗಳಿಗೆನಾಲ್ಕು ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳುವ ಯೋಜನೆಯನ್ನು ಕೇಂದ್ರ ಸರ್ಕಾರ ಕಳೆದ ವಾರ ಪ್ರಕಟಿಸಿತ್ತು. ಇದಕ್ಕೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದೆ.

'ಯೋಜನೆಯನ್ನು ವಿರೋಧಿಸುತ್ತಿರುವ ಯುವಕರೊಂದಿಗೆ ಇಡೀ ಕಾಂಗ್ರೆಸ್ ನಿಂತಿದೆ. ಅಗ್ನಿಪಥ ವಿರುದ್ಧದ ಯುವಕರ ಕೂಗನ್ನುದೇಶದ ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರಿಗೆ ಮುಟ್ಟಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಲಿದ್ದೇವೆ' ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಗೋವಿಂದ್‌ ಸಿಂಗ್‌ ಡೊಟಾಸರಾ ಹೇಳಿದ್ದಾರೆ.

ADVERTISEMENT

ಜೂನ್‌ 27ರಂದು ರಾಜ್ಯದಾದ್ಯಂತ, ಪ್ರತಿಯೊಂದು ವಿಧಾನಸಭೆ ವ್ಯಾಪ್ತಿಯಲ್ಲಿಯೂ ಪ್ರತಿಭಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

'ಕೇಂದ್ರದಲ್ಲಿ ಎರಡು ಬಾರಿ ಎನ್‌ಡಿಎ ಸರ್ಕಾರ ರಚನೆಯಾಗಲು ಮತ ಹಾಕಿದ ಯುವಕರು ಮೋಸ ಹೋಗಿದ್ದಾರೆ' ಎಂದು ಅಭಿಪ್ರಾಯಪಟ್ಟಿರುವ ಅವರು, ಯುವಕರ ಬೇಡಿಕೆಗಳನ್ನು ಬದಿಗೊತ್ತಲಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸೇನಾ ಪಡೆಗಳು ದುರ್ಬಲಗೊಂಡಿವೆ ಎಂದು ಕಿಡಿಕಾರಿದ್ದಾರೆ.

ಮುಂದುವರಿದು,ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೌಶಲ್ಯಪೂರ್ಣ ನಿರುದ್ಯೋಗಿಗಳನ್ನು ಕೆಲವೇ ಕೈಗಾರಿಕೋದ್ಯಮಿಗಳಿಗೆ ನೀಡಲು ಸಿದ್ಧತೆ ನಡೆಸಿದೆ ಎಂದೂಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.