ADVERTISEMENT

ಕೋವಿಡ್: ಕಠಿಣ ನಿರ್ಬಂಧ ಹೇರದಿದ್ದರೆ ಕಷ್ಟ – ಕೇಂದ್ರ ಸರ್ಕಾರ

ಕರ್ನಾಟಕವೂ ಸೇರಿದಂತೆ 10 ರಾಜ್ಯಗಳಿಗೆ ಸೂಚನೆ

ಪಿಟಿಐ
Published 31 ಜುಲೈ 2021, 20:57 IST
Last Updated 31 ಜುಲೈ 2021, 20:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ:ಕರ್ನಾಟಕವೂ ಸೇರಿದಂತೆ ಹತ್ತು ರಾಜ್ಯಗಳ 46 ಜಿಲ್ಲೆಗಳಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ 10ಕ್ಕಿಂತ ಹೆಚ್ಚು ಇದ್ದು, ಜನರ ಓಡಾಟ ಮತ್ತು ಜನಸಂದಣಿ ಸೇರುವುದನ್ನು ತಡೆಯಲು ಆ ಪ್ರದೇಶಗಳಲ್ಲಿ ಕಠಿಣ ನಿರ್ಬಂಧ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

46 ಜಿಲ್ಲೆಗಳಲ್ಲಿ ಶೇ 10ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದರೆ, ಇನ್ನೂ 53 ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 5ರಿಂದ ಶೇ 10ರಷ್ಟಿದೆ. ಹೀಗಾಗಿ ರಾಜ್ಯಗಳು ಕೋವಿಡ್ ಪತ್ತೆ ಪರೀಕ್ಷೆಗಳನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ತಿಳಿಸಿದೆ.

ಈ ಹಂತದಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸದಿದ್ದಲ್ಲಿ, ಪರಿಸ್ಥಿತಿಯು ಗಂಭೀರವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಒತ್ತಿ ಹೇಳಿದೆ.ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಒಡಿಶಾ, ಅಸ್ಸಾಂ, ಮಿಜೋರಾಂ, ಮೇಘಾಲಯ, ಆಂಧ್ರಪ್ರದೇಶ ಮತ್ತು ಮಣಿಪುರದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಶನಿವಾರ ಉನ್ನತ ಮಟ್ಟದ
ಸಭೆ ನಡೆಸಿದರು. ದೈನಂದಿನ ಕೋವಿಡ್ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಈ ರಾಜ್ಯಗಳಲ್ಲಿ ಆರೋಗ್ಯಅಧಿಕಾರಿಗಳ ಕಣ್ಗಾವಲು, ನಿಯಂತ್ರಣ ಮತ್ತು ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳನ್ನು ಸಭೆಯಲ್ಲಿ ಪರಿಶೀಲಿಸಲಾಯಿತು.

ADVERTISEMENT

‘ಈ ರಾಜ್ಯಗಳಲ್ಲಿ ಶೇ 80ಕ್ಕಿಂತಲೂ ಹೆಚ್ಚು ಸಕ್ರಿಯ ಪ್ರಕರಣಗಳು, ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ಜನರಲ್ಲಿ ವರದಿಯಾಗಿವೆ. ಇವರಿಂದ ಮನೆಯವರಿಗೆ ಸೋಂಕು ಹರಡದಂತೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ’ ಎಂದು ಸಚಿವಾಲಯ ತಿಳಿಸಿದೆ.

*ಶೇ 10ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಸೋಂಕು ಹೆಚ್ಚದಂತೆ ನೋಡಿಕೊಳ್ಳಲು, ಲಸಿಕೆ ಕಾರ್ಯಕ್ರಮ ಚುರುಕುಗೊಳಿಸಬೇಕು

* ಶೇ 80ರಷ್ಟು ಮರಣ ಪ್ರಮಾಣ ಕಂಡುಬಂದಿರುವ, ಹಿರಿಯ ನಾಗರಿಕರು ಮತ್ತು 45–60 ವರ್ಷದೊಳಗಿನ ಜನರಿಗೆ ಲಸಿಕೆ ಕಾರ್ಯಕ್ರಮ ಚುರುಕುಗೊಳಿಸಬೇಕು

* ಜಿಲ್ಲಾವಾರು ರೋಗ ಹರಡುವಿಕೆಯ ಮಾಹಿತಿ ಪಡೆಯಲು ರಾಜ್ಯಗಳು ತಮ್ಮದೇ ಸೆರೊ ಸರ್ವೆ ನಡೆಸಬೇಕು

*ಹೆಚ್ಚು ಪ್ರಕರಣ ವರದಿಯಾಗುವ ಕ್ಲಸ್ಟರ್‌ಗಳಲ್ಲಿ ಕಂಟೇನ್ಮೆಂಟ್ ವಲಯ ಗುರುತಿಸುವಿಕೆ, ಕಣ್ಗಾವಲು ಹೆಚ್ಚಿಸುವಿಕೆ ಮೊದಲಾದ ಕ್ರಮ ಜಾರಿಗೊಳಿಸಬೇಕು ಎಂದು ಕೇಂದ್ರ ಸೂಚಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.