ADVERTISEMENT

ಧಾರ್ಮಿಕ ಗುರು ಕುರಿತ ಯುಟ್ಯೂಬ್ ವಿಡಿಯೊ: ಗೂಗಲ್ CEO ಸುಂದರ್ ಪಿಚೈಗೆ ನೋಟಿಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಡಿಸೆಂಬರ್ 2024, 10:22 IST
Last Updated 2 ಡಿಸೆಂಬರ್ 2024, 10:22 IST
ಸುಂದರ್ ಪಿಚೈ, ಗೂಗಲ್ ಸಿಇಓ
ಸುಂದರ್ ಪಿಚೈ, ಗೂಗಲ್ ಸಿಇಓ   

ಮುಂಬೈ: ಧಾರ್ಮಿಕ ಗುರು ಕುರಿತ ಅವಹೇಳನಕಾರಿ ವಿಡಿಯೊ ಯುಟ್ಯೂಬ್‌ನಲ್ಲಿ ಪೋಸ್ಟ್‌ ಆಗಿರುವ ಆರೋಪದಡಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಮುಂಬೈನ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಬಲ್ಲಾರ್ಡ್‌ ಪೀರ್‌ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್‌ ಆದೇಶ ಹೊರಡಿಸಿದ್ದು, ‘ಪಾಖಂಡಿ ಬಾಬಾ ಕಿ ಕರ್ತೂತ್‌’ ಎಂಬ ಶೀರ್ಷಿಕೆಯುಳ್ಳ ವಿಡಿಯೊ ಮೂಲಕ ಸ್ವಯಂ ಸೇವಾ ಸಂಸ್ಥೆ ಹಾಗೂ ಧಾರ್ಮಿಕ ಗುರು ಯೋಗಿ ಅಶ್ವಿನಿ ಅವರನ್ನು ಗುರಿಯಾಗಿಸಿದ ವಿಡಿಯೊ ಪೋಸ್ಟ್ ಆಗಿದ್ದು, ಇದಕ್ಕೆ ಉತ್ತರಿಸುವಂತೆ ನ್ಯಾಯಾಲಯ ಹೇಳಿದೆ ಎಂದು ವರದಿಯಾಗಿದೆ.

ಈ ವಿಡಿಯೊ ತೆಗೆಯುವಂತೆ ಮಾರ್ಚ್ 31ರಂದು ಆದೇಶಿಸಲಾಗಿತ್ತು. ಆದರೆ ಆದೇಶ ಪಾಲಿಸುವಲ್ಲಿ ಗೂಗಲ್ ವಿಫಲವಾಗಿದೆ ಎಂದು ಸಲ್ಲಿಕೆಯಾದ ದೂರಿಗೆ ಸಂಬಂಧ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.

ADVERTISEMENT

ಈ ವಿಡಿಯೊದಲ್ಲಿ ಅವಹೇಳನಕಾರಿ ಹಾಗೂ ಅಶ್ಲೀಲ ಅಂಶಗಳಿವೆ. ಜತೆಗೆ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿರುವುದರಿಂದ ಧ್ಯಾನ್ ಪ್ರತಿಷ್ಠಾನ ಹಾಗೂ ಯೋಗಿ ಅಶ್ವಿನಿ ಅವರ ಗೌರವಕ್ಕೆ ಚ್ಯುತಿ ಎದುರಾಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.

ಈ ವಿಡಿಯೊ ಕುರಿತು 2023ರ ಅಕ್ಟೋಬರ್‌ನಲ್ಲಿ ಧ್ಯಾನ್ ಪ್ರತಿಷ್ಠಾನವು ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ಈ ವಿಡಿಯೊ ತೆಗೆಯಲು ನ್ಯಾಯಾಲಯದ ಆದೇಶವಿದ್ದರೂ, ಭಾರತದ ಹೊರಗೆ ಇದು ಲಭ್ಯವಿದೆ ಮತ್ತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ಗೂಗಲ್‌ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದೆ ಎಂದು ಆರೋಪಿಸಿತ್ತು.

ಇದಕ್ಕೆ ಪ್ರತಿಯಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 69ಎ ಅಡಿಯಲ್ಲಿ ಪ್ರಸಾರ ತಡೆಯಬೇಕೆಂದು ಹೇಳುವ ವಿಡಿಯೊದಲ್ಲಿ ಅವಹೇಳನಕಾರಿ ಅಂಶವಿದೆ ಎಂಬ ವಾದಕ್ಕೆ ಅರ್ಥವಿಲ್ಲ ಎಂದು ಗೂಗಲ್‌ ಪ್ರತಿವಾದಿಸಿತ್ತು. ಆದರೆ ನ್ಯಾಯಾಲಯ ಇದನ್ನು ತಿರಸ್ಕರಿಸಿದೆ. ಇಂಥ ಪ್ರಕರಣಗಳಲ್ಲಿ ಕ್ರಿಮಿನಲ್ ನ್ಯಾಯಗಳು ಮಧ್ಯಪ್ರವೇಶಿಸುವುದನ್ನು ಐಟಿ ಕಾಯ್ದೆ ತಡೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.