ADVERTISEMENT

ಕ್ಷಮೆಯಾಚನೆ: ಲಲಿತ್‌ ಮೋದಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಸಮಾಪ್ತಿ

ಪಿಟಿಐ
Published 24 ಏಪ್ರಿಲ್ 2023, 19:00 IST
Last Updated 24 ಏಪ್ರಿಲ್ 2023, 19:00 IST
ಲಲಿತ್‌ ಮೋದಿ
ಲಲಿತ್‌ ಮೋದಿ   

ನವದೆಹಲಿ: ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಕಾನೂನು ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಸಮಾಪ್ತಿಗೊಳಿಸಿತು. ಲಲಿತ್‌ ಅವರು ಬೇಷರತ್‌ ಕ್ಷಮೆಯಾಚಿಸಿದ ಬಳಿಕ ಸುಪ್ರೀ ಕೋರ್ಟ್‌ ಈ ಕ್ರಮ ತೆಗೆದುಕೊಂಡಿತು. 

ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಸಿ.ಟಿ. ರವಿಕುಮಾರ್‌ ಅವದಿದ್ದ ಪೀಠವು ಲಲಿತ್‌ ಸಲ್ಲಿಸಿದ್ದ ಅಫಿಡವಿಟ್‌ ಅನ್ನು ಪರಿಶೀಲಿಸಿತು. ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಲಯಗಳ ಘನತೆ ಮತ್ತು ಹಿರಿಮೆಗೆ ಅಗೌರವ ತರುವಂಥ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಲಲಿತ್‌ ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ನ್ಯಾಯಾಂಗವನ್ನು ನಿಂದಿಸುವಂಥ ಹೇಳಿಕೆಯನ್ನು ಲಲಿತ್‌ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಅವರ ಹೇಳಿಕೆಗಳನ್ನು ವಿರೋಧಿಸಿದ್ದ ಸುಪ್ರೀಂ ಕೋರ್ಟ್‌, ಸಾಮಾಜಿಕ ಜಾಲತಾಣಗಳು ಮತ್ತು ಪ್ರಮುಖ ಪತ್ರಿಕೆಗಳಲ್ಲಿ ಬೇಷರತ್‌ ಕ್ಷಮೆ ಯಾಚಿಸುವಂತೆ ಲಲಿತ್‌ಗೆ ಏಪ್ರಿಲ್‌ 13ರಂದು ಸೂಚಿಸಿತ್ತು.

ADVERTISEMENT

‘ನಾವು ಲಲಿತ್‌ ಅವರ ಬೇಷರತ್‌ ಕ್ಷಮೆಯನ್ನು ಸ್ವೀಕರಿಸಿದ್ದೇವೆ. ದೇಶದ ನ್ಯಾಯಾಂಗ ಮತ್ತು ನ್ಯಾಯಾಲಯಗಳ ಘನತೆಗೆ ಧಕ್ಕೆ ತರುವಂಥ ಕೆಲಸವನ್ನು ಭವಿಷ್ಯದಲ್ಲಿ ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರಿಗೆ ಸೂಚಿಸಲಾಗಿದೆ’ ಎಂದು ಪೀಠ ಹೇಳಿದೆ. 

‘ನ್ಯಾಯಾಲಯವು ಎಂದಿಗೂ ಕ್ಷಮೆಯಲ್ಲಿ ನಂಬಿಕೆ ಇರಿಸಿದೆ. ಅದರಲ್ಲೂ, ಹೃದಯಾಳದಿಂದ ಮತ್ತು ಬೇಷರತ್ತಾಗಿ ಕ್ಷಮೆ ಯಾಚಿಸಿದರೆ ಅದನ್ನು ನ್ಯಾಯಾಲಯ ಪರಿಗಣಿಸುತ್ತದೆ. ಹೀಗಾಗಿ ನಾವು ವಿಶಾಲವಾದ ಹೃದಯದಿಂದ ಈ ಕ್ಷಮೆಯನ್ನು ಸ್ವೀಕರಿಸಿದ್ದೇವೆ ಮತ್ತು ಈ ಪ್ರಕರಣದ ನ್ಯಾಯಾಂಗ ಪ್ರಕ್ರಿಯೆಯನ್ನು ಇಲ್ಲಿಯೇ ಸಮಾಪ್ತಿಗೊಳಿಸುತ್ತಿದ್ದೇವೆ. ಎಲ್ಲರೂ ನ್ಯಾಯಾಂಗವನ್ನು ಸಂಪೂರ್ಣವಾಗಿ ಗೌರವಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.