ಅಹಮದಾಬಾದ್: ಬ್ರಿಟನ್‌ನಲ್ಲಿ ಕೊಲೆ ಪ್ರಕರಣದಲ್ಲಿ 28 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬನನ್ನು, ಆತನ ಶಿಕ್ಷೆಯ ಬಾಕಿ ಅವಧಿಯನ್ನು ಪೂರೈಸಲು ಸೂರತ್‌ನ ಲಾಜಪೋರ್ ಜೈಲಿಗೆ ವರ್ಗಾಯಿಸಲಾಗಿದೆ.
ಶಿಕ್ಷೆಗೆ ಗುರಿಯಾದವರನ್ನು ಹಸ್ತಾಂತರ ಮಾಡಿಕೊಳ್ಳಲು ಭಾರತ ಮತ್ತು ಬ್ರಿಟನ್ ನಡುವೆ ಒಪ್ಪಂದ ಆದ ನಂತರದಲ್ಲಿ ಈ ರೀತಿಯ ವರ್ಗಾವಣೆ ಪ್ರಕರಣ ವರದಿಯಾಗಿರುವುದು ಇದೇ ಮೊದಲು ಎನ್ನಲಾಗಿದೆ.
27 ವರ್ಷ ವಯಸ್ಸಿನ ಜಿಗುಕುಮಾರ್ ಸೊರ್ತಿ ಎಂಬಾತನನ್ನು ಬ್ರಿಟನ್ನಿನ ಅಧಿಕಾರಿಗಳಿಂದ ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಆತನನ್ನು ಮಂಗಳವಾರ ಸೂರತ್‌ಗೆ ಕರೆತಂದಿದ್ದಾರೆ. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಆತನನ್ನು ಲಾಜಪೋರ್ ಜೈಲಿಗೆ ಕಳುಹಿಸಲಾಯಿತು.
ವಲಸಾಡ್ ಜಿಲ್ಲೆಯ ಉಮರಗಾಂವ್‌ನ ಜಿಗುಕುಮಾರ್‌ನಿಗೆ ಕೊಲೆ ಪ್ರಕರಣದಲ್ಲಿ 28 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಬ್ರಿಟನ್ನಿನ ಜೈಲಿನಲ್ಲಿ ಕೆಲವು ವರ್ಷಗಳನ್ನು ಈಗಾಗಲೇ ಕಳೆದಿದ್ದಾನೆ. ಶಿಕ್ಷೆಯ ಇನ್ನುಳಿದ ಅವಧಿಯನ್ನು ಈತ ಇಲ್ಲಿನ ಜೈಲಿನಲ್ಲಿ ಕಳೆಯಲಿದ್ದಾನೆ ಎಂದು ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹಲೋತ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಗುಕುಮಾರ್ ಮತ್ತು ಭಾವಿನಿ ಪರ್ವೀನ್ ಎಂಬುವವರ ನಡುವೆ 2017ರಲ್ಲಿ ಭಾರತದಲ್ಲಿ ಮದುವೆ ನಿಶ್ಚಯವಾಗಿತ್ತು. ಆದರೆ ಭಾವಿನಿ ಅವರು ಮದುವೆ ಮುರಿದುಕೊಂಡಿದ್ದಕ್ಕಾಗಿ ಜಿಗುಕುಮಾರ್, ಭಾವಿನಿ ಅವರನ್ನು ಅವರ ತಾಯಿಯ ಎದುರೇ 2020ರಲ್ಲಿ ಇರಿದು ಕೊಂದಿದ್ದ ಎಂದು ಬ್ರಿಟನ್ನಿನ ಮಾಧ್ಯಮ ವರದಿಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.