ADVERTISEMENT

ಸಾವಿರ ಗಡಿ ದಾಟಿದ ಕೊರೊನಾ ಸೋಂಕು ಪ್ರಕರಣ: ಭಾರತಕ್ಕೀಗ ಮೂರನೇ ಹಂತದ ಅಪಾಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 6:25 IST
Last Updated 29 ಮಾರ್ಚ್ 2020, 6:25 IST
   

ನವದೆಹಲಿ:ಜಗತ್ತನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್‌ ಸೋಂಕು ಭಾರತದಲ್ಲಿಯೂ ವ್ಯಾಪಕವಾಗುತ್ತಿದೆ.

ಮಹಾರಾಷ್ಟ್ರ, ಕೇರಳ, ಕರ್ನಾಟಕ, ಗುಜರಾತ್‌, ಉತ್ತರ ಪ್ರದೇಶ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿದ್ದು, ಜನರನ್ನು ತೀವ್ರ ಆತಂಕಕ್ಕೀಡು ಮಾಡಿದೆ.

ಕೋವಿಡ್‌-19 ಮೊದಲ ಪ್ರಕರಣ ಪ್ರಕರಣ ಪತ್ತೆಯಾದ ಮೂರೇ ವಾರಗಳಲ್ಲಿ ದೇಶದಾದ್ಯಂತ 1000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿದ್ದೆಗೆಡಿಸಿದೆ.

ADVERTISEMENT

ಮೊದಲು ಚೀನಾದ ವುಹಾನ್‌ನಲ್ಲಿ ಪತ್ತೆಯಾದ ಕೊರೊನಾ ವೈರಸ್‌ ಸೋಂಕು ಇಟಲಿ, ಸ್ಪೇನ್‌, ಪ್ರಾನ್ಸ್‌ ಮತ್ತು ಅಮೆರಿಕ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡಿದೆ. ಈಗಾಗಲೇ, ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕಿಗೆ 30, 880 ಜನರು ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿದೆ.

ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 1000 ಗಡಿ ದಾಟಿದೆ. ಚೀನಾ, ಇಟಲಿ, ಪ್ರಾನ್ಸ್‌ ಮತ್ತು ಅಮೆರಿಕಾ ದೇಶಗಳಿಗೆ ಹೋಲಿಸಿದರೆ ಇಲ್ಲಿನ ಸೋಂಕು ಪ್ರಕರಣಗಳ ಸಂಖ್ಯೆ ಈಗ ಕಡಿಮೆಯೇ ಎನ್ನಬಹುದು. ಆದರೆ, ಬೇರೆ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಹರಡುವಿಕೆಯ ಕಾಲಾನುಕ್ರಮ ಗಮನಿಸಿದರೆ, ಭಾರತದಲ್ಲೀಗ ಎರಡನೇ ಹಂತದಲ್ಲಿರುವ ಕೋವಿಡ್‌-19,ಮೂರನೇ ಹಂತಕ್ಕೆ ತಲುಪುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿವೆ. ಆ ಮೂಲಕಸಾವಿನ ಸಂಖ್ಯೆ ಶೀಘ್ರಗತಿಯ ಏರಿಕೆ ಕಾಣಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದರೂ, ಭಾರತದಲ್ಲಿ ಪ್ರತಿ ದಿನ ಕೊರೊನಾ ಸೋಂಕು ಪ್ರಕರಣಗಳು ವೇಗವಾಗಿ ಹೆಚ್ಚುತ್ತಲೇ ಇವೆ.

ಶನಿವಾರ ಒಂದೇ ದಿನ ದೇಶದಲ್ಲಿ 200ಕ್ಕೂ ಅಧಿಕ ಕೊರೊನಾ ವೈರಾಣು ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಕೋವಿಡ್‌-19 ಸೋಂಕಿತರ ಒಟ್ಟು ಸಂಖ್ಯೆ 1000 ಗಡಿ ದಾಟಿದೆ.

ಇತ್ತ ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 81ಕ್ಕೆ ಏರಿಕೆಯಾಗಿದ್ದು, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ, 180 ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಸೋಂಕಿತರ ಸಂಖ್ಯೆ 176ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.