ADVERTISEMENT

ಬೆಂಗಳೂರು: ಕೊರೊನಾ ವೈರಸ್ ಸೋಂಕಿತ ಟೆಕಿಯಿದ್ದ ಕಂಪನಿಯಲ್ಲೀಗ ವರ್ಕ್ ಫ್ರಂ ಹೋಂ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 11:45 IST
Last Updated 3 ಮಾರ್ಚ್ 2020, 11:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೈದರಾಬಾದ್‌ನಲ್ಲಿ ಸೋಮವಾರ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದ್ದ ಬೆಂಗಳೂರು ಟೆಕಿಯೊಂದಿಗೆ ಕೆಲಸ ಮಾಡುತ್ತಿದ್ದ ಸುಮಾರು 25 ಜನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್‌ನಲ್ಲಿ ಟೆಕಿಯೊಂದಿಗೆ ಪ್ರಯಾಣಿಸುತ್ತಿದ್ದ 23 ಪ್ರಯಾಣಿಕರಲ್ಲಿ 12 ಮಂದಿ ಬೆಂಗಳೂರಿಗೆ ಮರಳಿದ್ದಾರೆ ಮತ್ತು ಅವರನ್ನು ಸಂಪರ್ಕಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅವರಿಂದ ಮಾದರಿಗಳನ್ನು ಸಂಗ್ರಹಿಸಿ ವೈರಸ್ ಸೋಂಕು ತಗುಲಿರುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲದೆ, ದುಬೈ-ಬೆಂಗಳೂರು ವಿಮಾನದಲ್ಲಿ ಸೋಂಕು ಪೀಡಿತ ವ್ಯಕ್ತಿಯ ಮುಂಭಾಗ, ಹಿಂಭಾಗ ಮತ್ತು ಬದಿಗಳಲ್ಲಿ ಕುಳಿತಿದ್ದ ಸುತ್ತಲಿನ ಎರಡು ಸಾಲುಗಳ ಆಸನಗಳಲ್ಲಿನ 15 ಜನರನ್ನು ಕೂಡ ಸಂಪರ್ಕಿಸಲಾಗುತ್ತದೆ. ಟೆಕಿ ಜೊತೆಗೆ ಒಬ್ಬ ರೂಮ್‌ಮೇಟ್ ಇದ್ದರು. ಅವರು ವಾಸಿಸುತ್ತಿದ್ದ ಕಟ್ಟಡದ 92 ಫ್ಲ್ಯಾಟ್‌ಗಳ ಜನರನ್ನು ಕೂಡ ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

ಟೆಕಿ ಕೆಲಸ ಮಾಡುತ್ತಿದ್ದ ಕಂಪನಿಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಸಚಿವರು, 'ಹೌದು, ಈ ಬಗ್ಗೆ ಕಂಪನಿಗೆ ತಿಳಿಸಲಾಗಿದ್ದು, ಈಗಾಗಲೇ ಮುಚ್ಚಲಾಗಿದೆ ಮತ್ತು ಅವರು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿನಿರ್ದೇಶಕರಾದ ಡಾ. ಬಿ.ಜಿ. ಪ್ರಭಾಕರ್ ಕುಮಾರ್ ಮಾತನಾಡಿ, ವಿಮಾನದಲ್ಲಿದ್ದ ಕೆಲ ಪ್ರಯಾಣಿಕರು ನಮ್ಮ ಕರೆಯನ್ನು ಸ್ವೀಕರಿಸಿಲ್ಲ. ಅಲ್ಲದೆ, ಪ್ರೋಟೋಕಾಲ್ ಪ್ರಕಾರ, ಸುರಕ್ಷಿತ ದೂರದಲ್ಲಿದ್ದದ್ದರಿಂದ ಮತ್ತು ಪ್ರಾಥಮಿಕ ಸಂಪರ್ಕವೆಂದು ಪರಿಗಣಿಸದ ಕಾರಣ ಯಾವುದೇ ವಿಮಾನ ನಿಲ್ದಾಣದ ಸಿಬ್ಬಂದಿಗೆ ಅಪಾಯವಿಲ್ಲ ಎಂದು ಪರೀಕ್ಷಿಸಿದ ನಮ್ಮ ವೈದ್ಯರು ದೃಢಪಡಿಸಿದ್ದಾರೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ 630 ಪ್ರತ್ಯೇಕ ಹಾಸಿಗೆಗಳು ಲಭ್ಯವಿದೆ, ಖಾಸಗಿ ಆಸ್ಪತ್ರೆಗಳಲ್ಲಿ 1,630 ಹಾಸಿಗೆಗಳಿವೆ. ಕೊರೊನಾ ವೈರಸ್ ಪತ್ತೆಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ನಿಮ್ಹಾನ್ಸ್‌ನಲ್ಲಿ ಎರಡು ಪ್ರಯೋಗಾಲಯಗಳನ್ನು ಹೊಂದಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಇದುವರೆಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 35,391 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 250 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. 240 ಮಾದರಿಗಳಲ್ಲಿ 238 ಪ್ರಕರಣಗಳು ಸುರಕ್ಷಿತವಾಗಿವೆ. ಇನ್ನೆರಡು ಮಾದರಿಗಳ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ರಾಜ್ಯದಾದ್ಯಂತ ಈವರೆಗೆ 284 ಮಂದಿ ಮನೆಯಲ್ಲಿ ಪ್ರತ್ಯೇಕವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.