ADVERTISEMENT

ತಬ್ಲೀಗ್: ‘ನ್ಯಾಯಾಂಗ ವಿಚಾರಣೆ ಆಗಲಿ’, ಸಮಾವೇಶದ ಹೊಣೆಗಾರಿಕೆ ಪತ್ತೆಯಾಗಲಿ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ಅಶೋಕ್ ಗೆಹ್ಲೋಟ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 20:22 IST
Last Updated 7 ಏಪ್ರಿಲ್ 2020, 20:22 IST
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್   

ಜೈಪುರ/ಮುಂಬೈ: ‘ದೆಹಲಿಯಲ್ಲಿ ನಡೆದ ತಬ್ಲೀಗ್ ಜಮಾತ್ ಸಮಾವೇಶದ ಹೊಣೆ ಯಾರದು ಎಂದು ಪತ್ತೆ ಮಾಡಲು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಯಿಂದ ವಿಚಾರಣೆ ನಡೆಯಬೇಕು’ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮಂಗಳವಾರ ಆಗ್ರಹಿಸಿದ್ದಾರೆ.

‘ಧರ್ಮದ ಆಧಾರದಲ್ಲಿ ಜನರ ಮೇಲೆ ಆರೋಪ ಹೊರಿಸಬಾರದು ಹಾಗೂ ಸಮಾಜವನ್ನು ಒಡೆಯಬಾರದು. ತಬ್ಲೀಗ್ ಜಮಾತ್ ಸದಸ್ಯರು ತಪ್ಪು ಮಾಡಿದ್ದಾರೆ. ಆದರೆ ಇತರರು ಏಕೆ ಸಂಕಷ್ಟ ಎದುರಿಸಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.

‘ಯಾವುದೇ ಜಾತಿ ಅಥವಾ ಸಮುದಾಯದ ವ್ಯಕ್ತಿ ತಪ್ಪು ಮಾಡಬಹುದು. ಆದರೆ ತಪ್ಪಿತಸ್ಥರನ್ನು ಮಾತ್ರ ಶಿಕ್ಷಿಸಬೇಕು. ಸಮಾವೇಶ ನಡೆಯಲು ಯಾರೆಲ್ಲಾ ಹೊಣೆಗಾರರು ಎಂದು ವಿಚಾರಣೆಯಿಂದ ಸ್ಪಷ್ಟವಾಗುತ್ತದೆ. ಆಡಳಿತ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಎಡವಿದೆಯೆ ಎನ್ನುವುದೂ ಇದರಿಂದ ತಿಳಿಯುತ್ತದೆ. ನಿಜಾಮುದ್ದೀನ್‌ ಪ್ರಕರಣದಲ್ಲಿ ಆಡಳಿತ ಸಮಯಪ್ರಜ್ಞೆಯಿಂದ ಕ್ರಮ ಕೈಗೊಳ್ಳಬೇಕಿತ್ತು’ ಎಂದು ಅವರು ಹೇಳಿದ್ದಾರೆ.

ADVERTISEMENT

ಅನುಮತಿ ಹೇಗೆ ನೀಡಿದರು: ತಬ್ಲೀಗ್ ಜಮಾತ್ ಸಮಾವೇಶ ಆಯೋಜಿಸಲು ದೆಹಲಿ ಪೊಲೀಸರು ಹೇಗೆ ಅನುಮತಿ ನೀಡಿದರು ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಪ್ರಶ್ನಿಸಿದ್ದಾರೆ.

‘ಯಾವುದೇ ರಾಜಕೀಯದ ಉದ್ದೇಶ ಇಲ್ಲದೆ ನನ್ನಲ್ಲಿ ಎರಡು ಪ್ರಶ್ನೆಗಳು ಮೂಡುತ್ತಿವೆ. ಪ್ರಜೆಯಾಗಿ ನಾನು ಇವುಗಳನ್ನು ಕೇಳಲು ಬಯಸುತ್ತೇನೆ’ ಎಂದು ಅವರು ಫೇಸ್‌ಬುಕ್ ಮೂಲಕ ನಡೆದ ಸಂವಹನವೊಂದರಲ್ಲಿ ಹೇಳಿದ್ದಾರೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರುವರಿ ಕೊನೆಯ ವಾರದಲ್ಲಿ ದೆಹಲಿಗೆ ಬಂದ ಸಂದರ್ಭ ಅಲ್ಲಿ ಗಲಭೆ ಉಂಟಾಯಿತು. ಪೊಲೀಸ್ ಆಯುಕ್ತರು ಆಗ ಏನು ಮಾಡುತ್ತಿದ್ದರು ಎನ್ನುವುದು ಮೊದಲ ಪ್ರಶ್ನೆ. ಗಲಭೆಯಾದ ಎಂಟು ದಿನಗಳ ಬಳಿಕ ತಬ್ಲೀಗ್ ಜಮಾತ್ ಸಮಾವೇಶ ಆಯೋಜಿಸಿತು. ಇದೇ ಪೊಲೀಸ್ ಆಯುಕ್ತರು ಹೇಗೆ ಇದಕ್ಕೆ ಅನುಮತಿ ನೀಡಿದರು ಎನ್ನುವುದು ಎರಡನೇ ಪ್ರಶ್ನೆ. ಕೇವಲ 10 ದಿನಗಳಲ್ಲಿ ಇಂತಹ ಘಟನೆಗಳು ನಡೆಯಲು ದೆಹಲಿ ಆಡಳಿತ ಹೇಗೆ ಅವಕಾಶ ನೀಡಿತು? ಆಡಳಿತ ಈ ವೇಳೆ ಏನು ಮಾಡುತ್ತಿತ್ತು?’ ಎಂದು ಸುಳೆ ಪ್ರಶ್ನಿಸಿದ್ದಾರೆ.

‘ಸಮುದಾಯದ ವಿರುದ್ಧ ಆರೋಪ ಸಲ್ಲ’

ತಬ್ಲೀಗ್‌ ಜಮಾತ್‌ ಧಾರ್ಮಿಕ ಸಭೆಯ ಪ್ರಕರಣದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿ ಮಾಡಲಾಗುತ್ತಿದ್ದು, ಇದಕ್ಕೆ ಅವಕಾಶ ನೀಡಬಾರದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಸೋಂಕು ಹರಡಲು ಒಂದು ಸಮುದಾಯ ಕಾರಣ ಎಂಬ ಆರೋಪ ಹೊರಿಸುವ ಪ್ರಯತ್ನಗಳು ನಡೆಯುತ್ತಿವೆ. ತಬ್ಲೀಗ್‌ ಸಂಯೋಜಕರ ಬೇಜವಾಬ್ದಾರಿಗೆ ಮುಸ್ಲಿಂ ಸಮುದಾಯವನ್ನು ಹೊಣೆ ಮಾಡುವುದು ಸರಿಯಲ್ಲ. ಈ ರೀತಿಯ ನಡೆ ಕೋವಿಡ್‌–19 ವಿರುದ್ಧ ಈಗಿರುವ ಜನರ ಒಗ್ಗಟ್ಟನ್ನು ಒಡೆಯಲಿದೆ’ ಎಂದು ಉಲ್ಲೇಖಿಸಿದ್ದಾರೆ.

150 ಜನರ ವಿರುದ್ಧ ಎಫ್‌ಐಆರ್

ನವದೆಹಲಿಯ ನಿಜಾಮುದ್ದೀನ್‌ನಲ್ಲಿ ಕಳೆದ ತಿಂಗಳು ತಬ್ಲೀಗ್ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ 150 ಜನರ ವಿರುದ್ಧ, ‘ಕೊರೊನಾ ಸೋಂಕು ಹರಡಿರುವ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ’ ಆರೋಪದಡಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ದೂರು ನೀಡಿದೆ.

50 ಜನ ಸಂಪರ್ಕಕ್ಕೆ ಸಿಗುತ್ತಿಲ್ಲ’

‘ತಬ್ಲೀಗ್ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಹಿಂದಿರುಗಿರುವ 1,400 ಜನರಲ್ಲಿ 50 ಜನರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರು ಸ್ವಯಂಪ್ರೇರಿತರಾಗಿ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್‌ಮುಖ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.

‘ಈವರೆಗೆ ಇವರಲ್ಲಿ 1350 ಜನರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಉಳಿದವರು ತಮ್ಮ ಮೊಬೈಲ್‌ಗಳನ್ನು ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ನಿಷೇಧ ಕೋರಿ ಸಿಜೆಐಗೆ ಪತ್ರ

‘ತಬ್ಲೀಗ್ ಜಮಾತ್‌ನ ಚಟುವಟಿಕೆಗಳ ಮೇಲೆ ತಕ್ಷಣದಿಂದಲೇ ಜಾರಿಯಾಗುವಂತೆ ‘ಸಂಪೂರ್ಣ ನಿಷೇಧ’ ವಿಧಿಸಬೇಕು. ಈ ಕುರಿತು ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು’ ಎಂದು ಕೋರಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಎ. ಬೊಬಡೆ ಅವರಿಗೆ ಪತ್ರ ಬರೆಯಲಾಗಿದೆ.

‘ಸಮಾವೇಶದ ನೆಪದಲ್ಲಿ ದೇಶವಿಡೀ ಕೊರೊನಾ ಸೋಂಕು ಹರಡಿಸಲಾಗಿದೆ ಎನ್ನುವ ಆರೋಪ ಇದೆ. ಈ ಕುರಿತು ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಸೂಚಿಸಬೇಕು. ಎಂಸಿಡಿ ಕಾಯ್ದೆ ಅಡಿಯಲ್ಲಿ ನಿಜಾಮುದ್ದೀನ್‌ನಲ್ಲಿರುವ ತಬ್ಲೀಗ್‌ ಜಮಾತ್‌ನ ಕಟ್ಟಡವನ್ನು ನೆಲಸಮ ಮಾಡಬೇಕು. ತಮ್ಮ ಈ ಪತ್ರವನ್ನು ರಿಟ್ ಅರ್ಜಿ ಎಂದು ಪರಿಗಣಿಸಬೇಕು’ ಎಂದು ದೆಹಲಿ ಮೂಲದ ಅಜಯ್ ಗೌತಮ್ ಅವರು ಸಿಜೆಐಗೆ ಮನವಿ ಮಾಡಿದ್ದಾರೆ.

ಪೂಜಾ ಶಕುನ್‌ಬಂಧನ

ಲಖನೌ: ತಬ್ಲೀಗ್‌ ಜಮಾತ್‌ನ ಸದಸ್ಯರು ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಹರಡುತ್ತಿದ್ದಾರೆ ಎಂದು ಆರೋಪಿಸಿ, ಅವರಿಗೆ ಗುಂಡಿಕ್ಕಲು ಕರೆ ನೀಡಿದ್ದ ಅಖಿಲ ಭಾರತೀಯ ಹಿಂದೂ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್‌ ಪಾಂಡೆ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅಲೀಗಡದಲ್ಲಿರುವ ಮನೆಯಿಂದ ಪೂಜಾ ಮತ್ತು ಅವರ ಗಂಡ ಅಶೋಕ್‌ ಪಾಂಡೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಬ್ಲೀಗ್‌ ಜಮಾತ್‌ ಸದಸ್ಯರಿಗೆ ಗುಂಡಿಕ್ಕಬೇಕೆಂದು ಆಗ್ರಹಿಸಿ ಪೂಜಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಪೂಜಾ ಹಾಗೂ ಗಂಡನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಗುಂಡು ಹಾರಿಸುವ ಮೂಲಕ ಪೂಜಾ ಈ ಹಿಂದೆಯೂ ವಿವಾದಗಳಿಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.