ADVERTISEMENT

ಕೊರೊನಾ ಸಮರಕ್ಕೆ ಸಜ್ಜು: ಚೀನಾದಿಂದ 50,000 ಪಿಪಿಇ ಕಿಟ್ ಆಮದು ಮಾಡಿಕೊಂಡ ಅಸ್ಸಾಂ

ಏಜೆನ್ಸೀಸ್
Published 16 ಏಪ್ರಿಲ್ 2020, 3:37 IST
Last Updated 16 ಏಪ್ರಿಲ್ 2020, 3:37 IST
ಪಿಪಿಇ ಕಿಟ್‌ ಧರಿಸಿರುವ ಆರೋಗ್ಯ ಸಿಬ್ಬಂದಿ– ಸಂಗ್ರಹ ಚಿತ್ರ
ಪಿಪಿಇ ಕಿಟ್‌ ಧರಿಸಿರುವ ಆರೋಗ್ಯ ಸಿಬ್ಬಂದಿ– ಸಂಗ್ರಹ ಚಿತ್ರ   
""

ಗುವಾಹಟಿ: ಕೊರೊನಾ ವೈರಸ್‌ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿರುವ ಆರೋಗ್ಯ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಕಿಟ್‌ಗಳನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಚೀನಾದಿಂದ ಕಿಟ್‌ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಬುಧವಾರ ಚೀನಾದಿಂದ ಆಮದಾಗಿರುವ ಪಿಪಿಇ ಕಿಟ್‌ಗಳನ್ನು ಅಸ್ಸಾಂ ಪಡೆದಿದೆ.

ಬ್ಲೂ ಡಾರ್ಟ್‌ ಕಾರ್ಯಾಚರಿಸುತ್ತಿರುವ ಸರಕು ಸಾಗಣೆ ವಿಮಾನವು ಚೀನಾದಿಂದ ನೇರವಾಗಿ ಗುವಾಹಟಿಗೆ ಬುಧವಾರ ರಾತ್ರಿ ಬಂದಿಳಿದಿದೆ. ಚೀನಾ ವಿಶ್ವದ ಹಲವು ರಾಷ್ಟ್ರಗಳಿಗೆ ಪಿಪಿಇ ಕಿಟ್‌ಗಳನ್ನು ಪೂರೈಸುತ್ತಿದ್ದು, ಪ್ರಸ್ತುತಭಾರತ 50,000 ಕಿಟ್‌ಗಳನ್ನು ಪಡೆದುಕೊಂಡಿದೆ. ಅಸ್ಸಾಂನ ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಕಿಟ್‌ಗಳನ್ನು ಪಡೆದುಕೊಂಡಿದ್ದಾರೆ.

ಪ್ರಸ್ತುತ ಸುಮಾರು 1 ಲಕ್ಷ ಪಿಪಿಇ ಕಿಟ್‌ ಸಂಗ್ರಹ ಹೊಂದಿರುವ ಅಸ್ಸಾಂ, 2 ಲಕ್ಷ ಪಿಪಿಇ ಕಿಟ್‌ಗಳನ್ನು ಸಜ್ಜಾಗಿಡಲು ನಿರ್ಧರಿಸಿದೆ. 'ಚೀನಾದಿಂದ ನೇರವಾಗಿ ಕಿಟ್‌ಗಳನ್ನು ಆಮದು ಮಾಡಿಕೊಂಡಿರುವ ಭಾರತದ ಮೊದಲ ರಾಜ್ಯ ಅಸ್ಸಾಂ. ಶೀಘ್ರದಲ್ಲಿಯೇ ಆರೋಗ್ಯ ಸಿಬ್ಬಂದಿಗೆ ಕಿಟ್‌ಗಳನ್ನು ವಿತರಿಸಲಾಗುತ್ತದೆ' ಎಂದು ಆರೋಗ್ಯ ಸಚಿವ ಸರ್ಮಾ ಹೇಳಿದ್ದಾರೆ.

ADVERTISEMENT

ಅಸ್ಸಾಂನಲ್ಲಿ 32 ಕೊರೊನಾ ವೈರಸ್‌ ಸೋಂಕು ದೃಢಪಟ್ಟಿರುವ ಪ್ರಕರಣಗಳು ದಾಖಲಾಗಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ.

ದೇಶದ ಪಿಪಿಇ ಕಿಟ್‌ ತಯಾರಿಕಾ ಕಂಪನಿಗಳಿಂದ ಕೆಲವು ಸಾವಿರದಷ್ಟು ಕಿಟ್‌ಗಳಷ್ಟೇ ಪೂರೈಕೆಯಾಗಿದೆ. ಇತರೆ ರಾಜ್ಯಗಳಲ್ಲಿ ಆರೋಗ್ಯ ಸಿಬ್ಬಂದಿಗೆ ಕಿಟ್‌ ಪೂರೈಕೆಯಲ್ಲಿ ಉಂಟಾಗಿರುವ ಗೊಂದಲಗಳು ಅಸ್ಸಾಂನಲ್ಲಿ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅದಕ್ಕಾಗಿ ಸಾಕಷ್ಟು ಕಿಟ್‌ಗಳನ್ನು ಸಂಗ್ರಹಿಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕ್ರೀಡಾಂಗಣಗಳನ್ನು ಕ್ವಾರಂಟೈನ್‌ ಕೇಂದ್ರಗಳಾಗಿ ಮಾಡಲಾಗಿದೆ ಹಾಗೂ ಮೂರು ವೈದ್ಯಕೀಯ ಕಾಲೇಜುಗಳನ್ನು ಕೋವಿಡ್‌–19 ಆಸ್ಪತ್ರೆಗಳಾಗಿ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.