ADVERTISEMENT

Covid-19 India Update: ಸೋಂಕು ಹೆಚ್ಚಳದ ಆತಂಕ, ಚೇತರಿಕೆಯ ಸಮಾಧಾನ

ಏಜೆನ್ಸೀಸ್
Published 27 ಆಗಸ್ಟ್ 2020, 15:59 IST
Last Updated 27 ಆಗಸ್ಟ್ 2020, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಕೋವಿಡ್‌ ಸೋಂಕಿತರ ಹೆಚ್ಚಳವಾಗುತ್ತಿರುವ ಆತಂಕದ ನಡುವೆಯೂ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ ಎಂದು ಗುರುವಾರ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ದೇಶದಲ್ಲಿ ಒಟ್ಟಾರೆ 33 ಲಕ್ಷ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು ಅವುಗಳ ಪೈಕಿ 25 ಲಕ್ಷ ಸೋಂಕಿತರ ಗುಣಮುಖರಾಗಿದ್ದಾರೆ. ಕೇವಲ 7 ಲಕ್ಷ ಪ್ರಕರಣಗಳು ಮಾತ್ರ ಸಕ್ರಿಯವಾಗಿದ್ದು 60 ಸಾವಿರ ಜನರು ಮೃತಪಟ್ಟಿದ್ದಾರೆ. ಮೆರಿಕ ಸೇರಿದಂತೆ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗುರುವಾರ ಸಂಜೆ 8ರ ವೇಳೆಗೆ ಮಹಾರಾಷ್ಟ್ರದಲ್ಲಿ 14 ಸಾವಿರ ಪ್ರಕರಣಗಳು ದೃಢಪಟ್ಟಿವೆ, ಕರ್ನಾಟಕದಲ್ಲಿ 9 ಸಾವಿರ, ತಮಿಳುನಾಡಿಲ್ಲಿ 5 ಸಾವಿರ, ದೆಹಲಿಯಲ್ಲಿ 1800, ಬಂಗಾಳದಲ್ಲಿ 2900 ಹೊಸ ಪ್ರಕರಣಗಳು ವರದಿಯಾಗಿವೆ. ಇಂದು ಒಂದೇ ದಿನ 75 ಸಾವಿರ ಪ್ರಕರಣಗಳು ದೃಢಪಟ್ಟಿರುವುದು ಆತಂಕಕ್ಕೂ ಕಾರಣವಾಗಿದೆ.

ADVERTISEMENT

ವಿವಿಧ ರಾಜ್ಯಗಳ ಪೊಲೀಸ್ ಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ (ಸಿಎಪಿಎಫ್) 60,000ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೇಶದಾದ್ಯಂತ 340ಕ್ಕಿಂತಲೂ ಹೆಚ್ಚು ಪೊಲೀಸರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಪೊಲೀಸ್, ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಜಾರ್ಖಂಡ್ ಪೊಲೀಸ್ ಪಡೆಯಲ್ಲಿ ಅತೀ ಹೆಚ್ಚು ಸಿಬ್ಬಂದಿಗಳಿಗೆ ಕೊರೊನಾವೈರಸ್ ಸೋಂಕು ತಗುಲಿದೆ ಎಂದು ಇಂಡಿಯನ್ ಪೊಲೀಸ್ ಫೌಂಡೇಷನ್ (ಐಪಿಎಫ್) ಅಂಕಿ ಅಂಶಗಳು ಹೇಳಿವೆ.

ಗುರುವಾರ ಬೆಳಗ್ಗೆ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಅಂಕಿ ಅಂಶಗಳು

ದೇಶದಲ್ಲಿ ಹೆಚ್ಚು ಸೋಂಕಿತರನ್ನು ಹೊಂದಿರುವ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಇಲ್ಲಿ 7.04ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಈವರೆಗೆ 22,794 ಮಂದಿ ಮೃತಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 3.91 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದ್ದು, ಇದುವರೆಗೆ 6,721 ಮಂದಿ ಸಾವಿಗೀಡಾಗಿದ್ದಾರೆ.ಆಂಧ್ರಪ್ರದೇಶದಲ್ಲಿ 3.82 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಇದುವರೆಗೆ 3,541 ಮಂದಿ ಕೊನೆಯುಸಿರೆಳೆದಿದ್ದಾರೆ.

ಇತ್ತ ರಾಜ್ಯದಲ್ಲಿ ಬುಧವಾರ 8,580 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್‌ ಪೀಡಿತರ ಸಂಖ್ಯೆ 3 ಲಕ್ಷಕ್ಕೆ ಏರಿದೆ. 133 ಜನ ಸೋಂಕಿನಿಂದ ಮೃತಪಟ್ಟಿರುವುದು ಖಚಿತವಾಗಿದ್ದು ಈವರೆಗೆ ಸಾವಿಗೀಡಾದವರ ಒಟ್ಟು ಸಂಖ್ಯೆ ಐದು ಸಾವಿರ ದಾಟಿದೆ.

ಈವರೆಗೆ ದೇಶದಲ್ಲಿ 3.8 ಕೋಟಿ ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.