ADVERTISEMENT

ಕ್ಷಿಪ್ರಗತಿ ಪರೀಕ್ಷೆಯೇ ಪರಿಹಾರ

ಕೋವಿಡ್ ದೇಶಕ್ಕೆ ಸವಾಲೂ ಹೌದು, ಅವಕಾಶವೂ ಹೌದು –ರಾಹುಲ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 19:45 IST
Last Updated 18 ಏಪ್ರಿಲ್ 2020, 19:45 IST
ರಾಹುಲ್‌
ರಾಹುಲ್‌   

ನವದೆಹಲಿ: ‘ಕೋವಿಡ್‌–19’ನಿಂದಾಗಿ ಉದ್ಭವಿಸಿರುವ ಸದ್ಯದ ಸ್ಥಿತಿಯು ದೇಶದ ಮುಂದಿರುವ ದೊಡ್ಡ ಸವಾಲು. ಹಾಗೆಯೇ ಇದು ‘ಉತ್ತಮ ಅವಕಾಶ’ವೂ ಹೌದು’ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ವ್ಯಾಖ್ಯಾನಿಸಿದ್ದಾರೆ.

‘ಸದ್ಯದ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಎದುರಿಸುವ ಹೊಸ ಸಾಧ್ಯತೆಗಳನ್ನು ಗುರುತಿಸಲು ದೇಶದ ಪ್ರತಿಭಾನ್ವಿತ ವಿಜ್ಞಾನಿಗಳು, ಎಂಜಿನಿಯರುಗಳು, ಡೇಟಾ ಪರಿಣತರನ್ನು ಒಗ್ಗೂಡಿಸಲು ಇದು ಸಕಾಲ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್‌–19 ವಿರುದ್ಧ ಸಂಘಟನಾತ್ಮಕ ಹೋರಾಟ ಈಗಿನ ಅಗತ್ಯ. ಕೊರೊನಾ ಸೋಂಕು ಹಿಮ್ಮೆಟ್ಟಿಸಲು ಸದ್ಯ ಲಾಕ್‌ಡೌನ್‌ ಒಂದೇ ಪರಿಹಾರವಲ್ಲ. ತ್ವರಿತಗತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದೇ ಇದನ್ನು ಎದುರಿಸುವ ಪ್ರಮುಖ ಅಸ್ತ್ರ‘ ಎಂದು ರಾಹುಲ್‌ ಪ್ರತಿಪಾದಿಸಿದ್ದಾರೆ.

ADVERTISEMENT

‘ಯಾವುದೇ ರೋಗಕ್ಕಿಂತಲೂ ದೇಶ ದೊಡ್ಡದು. ಇದಕ್ಕಿಂತಲೂ ದೊಡ್ಡದಾದ ಸವಾಲುಗಳನ್ನು ಎದುರಿಸುವುದು ದೇಶಕ್ಕೆ ತಿಳಿದಿದೆ’ ಎಂದು ಹೇಳಿದ್ದಾರೆ.

ಜವಾಬ್ದಾರಿಯುತ ನಡೆ: ಶಿವಸೇನೆ

ಮುಂಬೈ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಶಿವಸೇನಾ, ‘ಬಿಕ್ಕಟ್ಟಿನ ಸಂದರ್ಭದಲ್ಲಿ ಜವಾಬ್ದಾರಿಯುತ ವಿರೋಧಪಕ್ಷ ಹೇಗಿರಬೇಕು ಹಾಗೂ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿದ್ದಾರೆ’ ಎಂದು ಹೇಳಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆಗೂಡಿ ಶಿವಸೇನಾ ಸರ್ಕಾರ ರಚಿಸಿದೆ. ರಾಹುಲ್‌ ಅವರು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಸೂಕ್ತ ನಿರ್ಧಾರ ತಳೆದಿದ್ದು, ಮೋದಿ ಜೊತೆಗಿನ ಭಿನ್ನಮತದ ನಡುವೆಯೂ ರಾಜಕೀಯ ಪಕ್ವತೆ ಪ್ರದರ್ಶಿಸಿದ್ದಾರೆ ಎಂದಿದೆ. ಈ ಬಗ್ಗೆ ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯವನ್ನು ಬರೆದಿದೆ. ಕೊರೊನಾ ಬಿಕ್ಕಟ್ಟು ಕುರಿತು ರಾಹುಲ್‌ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮುಖಾಮುಖಿ ಚರ್ಚಿಸಬೇಕು ಎಂದೂ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.