ADVERTISEMENT

ಕೊರೊನಾ ನಿರ್ಲಕ್ಷ್ಯ: ಗಾಯಕಿ ಕನಿಕಾ ಕಪೂರ್‌ ವಿರುದ್ಧ ಎಫ್‌ಐಆರ್

ಪಿಟಿಐ
Published 21 ಮಾರ್ಚ್ 2020, 1:48 IST
Last Updated 21 ಮಾರ್ಚ್ 2020, 1:48 IST
ಗಾಯಕಿ ಕನಿಕಾ ಕಪೂರ್‌
ಗಾಯಕಿ ಕನಿಕಾ ಕಪೂರ್‌   

ಲಖನೌ: ಕೊರೊನಾವೈರಸ್‌ (ಕೊವಿಡ್‌–19) ಸೋಂಕು ತಗುಲಿರುವ ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ ವಿರುದ್ಧ ನಿರ್ಲಕ್ಷ್ಯ ಮತ್ತು ಸರ್ಕಾರದ ಆದೇಶಕ್ಕೆ ಅಸಹಕಾರ ತೋರಿದ ಆರೋಪದಡಿ ಉತ್ತರ ಪ್ರದೇಶದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲಖನೌನ ಸರೋಜಿನಿ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸೂರ್‌ಜಿತ್ ಪಾಂಡೆ ತಿಳಿಸಿದ್ದಾರೆ.

‘ಭಾರತೀಯ ದಂಡ ಸಂಹಿತೆಯ ಸೆಕ್ಷನ್ 269, 270 (ಜೀವಕ್ಕೆ ಅಪಾಯಕಾರಿಯಾದ ಸೋಂಕು ಹರಡುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುವುದಕ್ಕೆ ಸಂಬಂದಿಸಿದ್ದು), ಮತ್ತು ಸೆಕ್ಷನ್ 188 (ಸರ್ಕಾರಿ ಅಧಿಕಾರಿ ನೀಡಿದ ಆದೇಶಕ್ಕೆ ಅಸಹಕಾರ) ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪಾಂಡೆ ಹೇಳಿದ್ದಾರೆ.

ADVERTISEMENT

ಲಖನೌನ ಮುಖ್ಯ ವೈದ್ಯಕೀಯ ಅಧಿಕಾರಿ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಜರತ್‌ಗಂಜ್ ಮತ್ತು ಗೋಮತಿನಗರ್ ಪೊಲೀಸ್ ಠಾಣೆಗಳಲ್ಲಿಯೂ ಗಾಯಕಿ ವಿರುದ್ಧ ಎಫ್‌ಐಆರ್ ದಾಖಲಾಗುವ ಸಾಧ್ಯತೆ ಇದೆ. ಈ ಠಾಣೆಗಳ ವ್ಯಾಪ್ತಿಯಲ್ಲಿ ಅವರು ಮೂರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಇತ್ತೀಚೆಗಷ್ಟೇ ಇಂಗ್ಲೆಂಡ್‌ನಿಂದ ಮರಳಿದ್ದ ಕನಿಕಾ ಕಪೂರ್‌ಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ಶುಕ್ರವಾರ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ, ವಿದೇಶದಿಂದ ಬಂದ ಬಳಿಕ ಕನಿಕಾ ಅವರು ಅತಿಥಿಯಾಗಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಅವರ ಪುತ್ರ ದುಶ್ಯಂತ್‌ ಸಿಂಗ್‌ ಭಾಗಿಯಾಗಿರುವುದು ತಿಳಿದುಬಂದಿತ್ತು. ಕಾರ್ಯಕ್ರಮದ ನಂತರ ದುಶ್ಯಂತ್‌ ಸಂಸತ್‌ ಸದನದಲ್ಲಿಯೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.