ADVERTISEMENT

ಓಮಿಕ್ರಾನ್: ವಿಸ್ತೃತ ಅಧ್ಯಯನ ಅಗತ್ಯ: ವೈದ್ಯಕೀಯ ತಜ್ಞರು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 20:28 IST
Last Updated 27 ನವೆಂಬರ್ 2021, 20:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದಕ್ಷಿಣ ಆಫ್ರಿಕಾದ ಮತ್ತು ಅದರ ಪಕ್ಕದ ದೇಶಗಳಲ್ಲಿ ಓಮಿಕ್ರಾನ್ ಸೋಂಕಿಗೀಡಾದ ಸಮುದಾಯಗಳನ್ನು ಪತ್ತೆ ಮಾಡಿ, ವಿಸ್ತೃತ ಅಧ್ಯಯನ ನಡೆಸುವುದು ಅಗತ್ಯ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮುಂದಿನ ಕ್ರಮಗಳನ್ನು ನಿರ್ಧರಿಸುವುದಕ್ಕೂ ಮುನ್ನ, ಕ್ಲಿನಿಕಲ್‌ ಮಾಹಿತಿ ಕಲೆಹಾಕುವುದರ ಜೊತೆಗೇ ಈ ಕೆಲಸ ಆಗಬೇಕು ಎಂದಿದ್ದಾರೆ.

‘ಪ್ರಯಾಣ ನಿರ್ಬಂಧ ವಿಧಿಸುವುದರಿಂದ ಅಥವಾ ಕೆಲವು ದೇಶಗಳಿಂದ ಬರುವವರನ್ನು ತಡೆಯುವುದು ಓಮಿಕ್ರಾನ್ ನಿಗ್ರಹ ಅಥವಾ ಹರಡದಂತೆ ನಿಯಂತ್ರಿಸಲು ಹೆಚ್ಚು ನೆರವಾಗುವುದಿಲ್ಲ.ಪ್ರಕರಣಗಳು ಪತ್ತೆಯಾದ ಸಮುದಾಯಗಳನ್ನು ಗುರುತಿಸಿ, ಜೆನೊಮಿಕ್ ಸೀಕ್ವೆನ್ಸ್ ಅಧ್ಯಯನ ಮಾಡಬೇಕು’ ಎಂದು ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಗಿರಿಧರ್ ಆರ್. ಬಾಬು ಹೇಳಿದ್ದಾರೆ.

ADVERTISEMENT

ಇಸ್ರೇಲ್, ಬೆಲ್ಜಿಯಂ, ಬ್ರಿಟನ್‌ನಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

‘ನಮಗೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿನ ಕ್ಲಿನಿಕಲ್ ಮಾಹಿತಿ ಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆ ರಚಿಸಿದ್ದ ಸ್ಟ್ರಾಟೆಜಿಕ್ ತಂಡದ ಸದಸ್ಯ, ಹಿರಿಯ ವಿಜ್ಞಾನಿ ಗಗನ್‌ದೀಪ್ ಕಾಂಗ್ ತಿಳಿಸಿದ್ದಾರೆ.

ಆರ್‌ಟಿಪಿಸಿಆರ್ ಪರೀಕ್ಷೆಯಿಂದ ಈ ತಳಿ ಸುಲಭವಾಗಿ ಪತ್ತೆಯಾಗುತ್ತದೆ. ವ್ಯಾಪಕವಾಗಿ ಬಳಸಿದ ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ಈ ರೂಪಾಂತರ ಪತ್ತೆಗೂ ಬಳಸಬಹುದೆಂದು ಹಲವಾರು ಪ್ರಯೋಗಾಲಯಗಳು ಸೂಚಿಸಿವೆ. ಕೋವಿಡ್ -19 ಸೋಂಕಿನ ಹಿಂದಿನ ರೂಪಾಂತರಿಗಳಿಗಿಂತ ವೇಗವಾಗಿ ಹರಡುವ ಈ ಹೊಸ ತಳಿಯನ್ನು ಪತ್ತೆಹಚ್ಚಲು ಆರ್‌ಟಿಪಿಸಿಆರ್ ಪರೀಕ್ಷೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.