ADVERTISEMENT

ಅಪಾಯಕಾರಿಯಾದ ರೈಲು ಪ್ರಯಾಣ: ರೈಲಿನಲ್ಲಿ ಪ್ರಯಾಣಿಸಿದ 12 ಮಂದಿಗೆ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 14:24 IST
Last Updated 21 ಮಾರ್ಚ್ 2020, 14:24 IST
   
""

ನವದೆಹಲಿ: ಮಾರ್ಚ್‌ 13ರಿಂದ 16ರ ನಡುವೆ ರೈಲು ಪ್ರಯಾಣ ನಡೆಸಿರುವವರ ಪೈಕಿ ಕನಿಷ್ಠ 12 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ ಎಂದು ಭಾರತೀಯ ರೈಲ್ವೆ ಶನಿವಾರ ಹೇಳಿದೆ.ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಪ್ರಯಾಣ ಮುಂದೂಡುವಂತೆ ಭಾರತೀಯ ರೈಲ್ವೆ ಮನವಿ ಮಾಡಿದೆ.

‘ರೈಲುಗಳಲ್ಲಿ ಪ್ರಯಾಣಿಸಿದವರ ಪೈಕಿ 12 ಜನರಲ್ಲಿಕೋವಿಡ್‌–19 ಇರುವುದು ದೃಢಪಟ್ಟಿದೆ. ಇದರಿಂದ ಪ್ರಸ್ತುತ ರೈಲಿನಲ್ಲಿ ಪ್ರಯಾಣಿಸುವುದು ಅಪಾಯಕಾರಿಯಾಗಿ ಪರಿಣಮಿಸಿದೆ. ನಿಮ್ಮ ಸಹ ಪ್ರಯಾಣಿಕರಿಗೆ ಕೊರೊನಾ ವೈರಸ್‌ ಸೊಂಕು ಇದ್ದರೆ ಅದರಿಂದ ನಿಮಗೂ ಹರಡಬಹುದು. ಹಾಗಾಗಿ ರೈಲು ಪ್ರಯಾಣ ತಪ್ಪಿಸಿ. ಪ್ರಯಾಣ ಮುಂದೂಡಿ ಹಾಗೂ ನಿಮ್ಮನ್ನು ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ಜೋಪಾನ ಮಾಡಿ’ ಎಂದು ರೈಲ್ವೆ ಶನಿವಾರ ಟ್ವೀಟ್‌ ಮಾಡಿದೆ.

ರೈಲನ್ನು ಹತ್ತುವ ಮೊದಲು ಪ್ರತಿಯೊಬ್ಬ ಪ್ರಯಾಣಿಕರನ್ನು ಪರೀಕ್ಷಿಸುವ ವ್ಯವಸ್ಥೆಯನ್ನು ಕೂಡಲೇ ಅಳವಡಿಸಿಕೊಳ್ಳುವಂತೆ ಎಲ್ಲಾ ವಲಯ ಕಚೇರಿಗಳಿಗೆ ಸೂಚನೆ ನೀಡಿರುವ ರೈಲ್ವೆ, ಈ ಉದ್ದೇಶಕ್ಕಾಗಿ ಆಯಾ ರಾಜ್ಯ ಸರ್ಕಾರಗಳ ನೆರವು ಪಡೆಯುವಂತೆಯೂ ಸೂಚಿಸಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಮೂವರು ವಿದೇಶಿಯರು ಸೇರಿದಂತೆ 52ಕ್ಕೂ ಹೆಚ್ಚು ಕೋವಿಡ್–19 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಸಾರಿಗೆ ಬಳಸದಂತೆ ಈಗಾಗಲೇ ಅಲ್ಲಿನ ಸರ್ಕಾರ ಜನರಿಗೆ ಮನವಿ ಮಾಡಿದೆ.

ಭಾನುವಾರ ಜನತಾ ಕರ್ಫ್ಯೂ ನಡೆಸಲು ನಿರ್ಧರಿಸುವುದರಿಂದ ಯಾವುದೇ ರೈಲುಗಳ ಸಂಚಾರ ಇರುವುದಿಲ್ಲ. ಭಾನುವಾರಕ್ಕಿಂತಲೂ ಮೊದಲೇ ಸಂಚಾರ ಆರಂಭಿಸಿರುವ ರೈಲುಗಳ ಪ್ರಯಾಣ ಮುಂದುವರಿಯಲಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಆಂಧ್ರ ಪ್ರದೇಶ ಸಂಪರ್ಕ ಕ್ರಾಂತಿ ರೈಲಿನಲ್ಲಿ ಮಾರ್ಚ್‌ 13ರಂದು ಪ್ರಯಾಣಿಸಿರುವ ಜನರ ಪೈಕಿ 8 ಮಂದಿಗೆ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ಬೆಂಗಳೂರು–ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಶನಿವಾರ ಕ್ವಾರಂಟೈನ್‌ ಸೀಲ್‌ ಹೊಂದಿರುವ ದಂಪತಿ ಪ್ರಯಾಣಿಸುತ್ತಿರುವುದನ್ನು ಸಹ ಪ್ರಯಾಣಿಕರು ಕಾಝಿಪೇಟ್‌ ಸಮೀಪ ಗಮನಿಸಿದ್ದು, ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.