ADVERTISEMENT

ನಿಜಾಮುದ್ದೀನ್‌ ಮಸೀದಿಯಲ್ಲಿ ಹರಡಿದ ಕೋವಿಡ್–19: ಯೋಗಿ ಆದಿತ್ಯನಾಥ್ ತುರ್ತು ಸಭೆ

ಪಿಟಿಐ
Published 31 ಮಾರ್ಚ್ 2020, 9:23 IST
Last Updated 31 ಮಾರ್ಚ್ 2020, 9:23 IST
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)   

ಲಖನೌ: ದೆಹಲಿಯ ನಿಜಾಮುದ್ದೀನ್‌ ಮಸೀದಿಯಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಕೊರೊನಾ ವೈರಸ್ ಸೋಂಕು (ಕೋವಿಡ್–19) ತಗುಲಿರುವ ವರದಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.

ನಿಜಾಮುದ್ದೀನ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಗೆ ಹಾಜರಾಗಿದ್ದ ಹಲವರಲ್ಲಿ ಕೋವಿಡ್‌–19 ದೃಢಪಟ್ಟಿದೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಕೋವಿಡ್–19 ಪೀಡಿತ ಪ್ರದೇಶಗಳ ಭೇಟಿ ರದ್ದುಪಡಿಸಿರುವ ಯೋಗಿ ಆದಿತ್ಯನಾಥ್ ಲಖನೌಗೆ ಮರಳಿದ್ದಾರೆ.

ಯೋಗಿ ಅವರು ಇಂದು ಬೆಳಿಗ್ಗೆ ಗಾಜಿಯಾಬಾದ್‌ಗೆ ಭೇಟಿ ನೀಡಿದ್ದರು. ಬಳಿಕ ಮೀರತ್ ಮತ್ತ ಆಗ್ರಾಗೆ ಭೇಟಿ ನೀಡಬೇಕಿತ್ತು. ಆದರೆ, ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸುವ ಸಲುವಾಗಿ ವಾಪಸಾಗಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ನಿಜಾಮುದ್ದೀನ್‌ ಜಮಾಅತ್‌ ಮಸೀದಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದವರ ಪೈಕಿ ಕೊರೊನಾ ವೈರಸ್‌ ಸೋಂಕಿನಿಂದಾಗಿ ಈಗಾಗಲೇ 7 ಮಂದಿ ಸಾವಿಗೀಡಾಗಿದ್ದು, ಕನಿಷ್ಠ 24 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ. ಮಾರ್ಚ್‌ 10ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.