ADVERTISEMENT

ಛತ್ತೀಸಗಢದಲ್ಲಿ ಕಾಂಗ್ರೆಸ್ ಪತನಕ್ಕೆ ಕ್ಷಣಗಣನೆ: ನರೇಂದ್ರ ಮೋದಿ

ಪಿಟಿಐ
Published 13 ನವೆಂಬರ್ 2023, 15:35 IST
Last Updated 13 ನವೆಂಬರ್ 2023, 15:35 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸಗಢದ ಮಹಾಸಮುಂದ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡರು. </p></div>

ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸಗಢದ ಮಹಾಸಮುಂದ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡರು.

   

ಪಿಟಿಐ ಚಿತ್ರ

ಮುಂಗೇಲಿ/ಮಹಾಸಮುಂದ್: ಭ್ರಷ್ಟಾಚಾರದ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಛತ್ತೀಸಗಢದಲ್ಲಿ ಕಾಂಗ್ರೆಸ್ ನೆತೃತ್ವದ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ಸೋಮವಾರ ಹೇಳಿದ್ದಾರೆ.

ADVERTISEMENT

ಛತ್ತೀಸಗಢದ ಮುಂಗೇಲಿ ಹಾಗೂ ಮಹಾಸಮುಂದ್‌ನಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಭೂಪೇಶ್ ಬಘೆಲ್ ಹಾಗೂ ಉಪ ಮುಖ್ಯಮಂತ್ರಿ ಟಿ.ಎಸ್. ಸಿಂಗ್ ದೇವ್ ಅವರ ನಡುವಿನ ಅಧಿಕಾರ ಹಂಚಿಕೆ ಕುರಿತು ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ ಮೋದಿ ಅವರು, ‘ಕಾಂಗ್ರೆಸ್ ಪಕ್ಷವು ತನ್ನದೇ ಹಿರಿಯ ನಾಯಕರನ್ನು ಕೈಬಿಡಲು ಸಿದ್ಧವಿದೆ ಎಂದಾದರೆ ಪಕ್ಷವು ಜನರಿಗೆ ವಂಚಿಸಲು ಕೂಡ ಸಿದ್ಧವಿದೆ ಎಂಬುದು ಖಚಿತ. ಜನರಿಗೆ ನೀಡಿರುವ ಭರವಸೆಗಳನ್ನು ಪಕ್ಷವು ಈಡೇರಿಸುವುದಿಲ್ಲ’ ಎಂದರು.

‘ಅವರು (ಬಘೆಲ್) ತಮ್ಮ ಸ್ಥಾನವನ್ನು ಎರಡೂವರೆ ವರ್ಷಗಳಲ್ಲಿ ದುರ್ಬಳಕೆ ಮಾಡಿಕೊಂಡರು. ಸಹಸ್ರಾರು ಕೋಟಿ ರೂಪಾಯಿ ಮೊತ್ತದ ಹಗರಣ ನಡೆಸಿದರು. ಇಡೀ ಆಟವನ್ನು ಬದಲಾಯಿಸಿದರು. ಎರಡೂವರೆ ವರ್ಷ ಪೂರ್ಣಗೊಂಡ ನಂತರ ಖಜಾನೆಯನ್ನು ದೆಹಲಿಗೆ ಮುಕ್ತವಾಗಿಸಿದರು, ಎಲ್ಲರನ್ನೂ ಖರೀದಿಸಿದರು. ಅಧಿಕಾರ ಹಂಚಿಕೆ ಒಪ್ಪಂದವನ್ನು ಕೈಬಿಡಲಾಯಿತು. ಇದು ಕಾಂಗ್ರೆಸ್ಸಿನ ಹಳಬರಲ್ಲಿ ಅಸಂತೋಷ ಮೂಡಿಸಿತು’ ಎಂದು ಮೋದಿ ಅವರು ಹೇಳಿದರು.

ಛತ್ತೀಸಗಢವನ್ನು ಲೂಟಿ ಮಾಡಿ ತನ್ನ ಖಜಾನೆ ಭರ್ತಿ ಮಾಡಿಕೊಳ್ಳುವುದು ಮಾತ್ರ ಕಾಂಗ್ರೆಸ್ಸಿನ ಗುರಿ. ಬಘೆಲ್ ಅವರ ಪುತ್ರ ಹಾಗೂ ಇತರರು ‘ಸೂಪರ್ ಸಿ.ಎಂ.’ ರೀತಿ ವರ್ತಿಸಿ ರಾಜ್ಯವನ್ನು ನಾಶ ಮಾಡಿದ್ದಾರೆ ಎಂದು ದೂರಿದರು.

‘ಛತ್ತೀಸಗಢದಲ್ಲಿ ತನ್ನ ಅವಧಿ ಮುಗಿದಿದೆ ಎಂಬುದು ಕಾಂಗ್ರೆಸ್ಸಿಗೆ ಅರ್ಥವಾಗಿದೆ. ಮುಖ್ಯಮಂತ್ರಿ (ಬಘೆಲ್) ಅವರೇ ಚುನಾವಣೆಯಲ್ಲಿ (ಪಾಠನ್ ವಿಧಾನಸಭಾ ಕ್ಷೇತ್ರದಲ್ಲಿ) ಸೋಲಲಿದ್ದಾರೆ ಎಂದು ದೆಹಲಿಯ ಕೆಲವು ಪತ್ರಕರ್ತ ಸ್ನೇಹಿತರು ಹಾಗೂ ರಾಜಕೀಯ ವಿಶ್ಲೇಷಕರು ನನಗೆ ಹೇಳಿದ್ದಾರೆ’ ಎಂದು ಮೋದಿ ತಿಳಿಸಿದರು.

ಕಾಂಗ್ರೆಸ್ಸಿಗೆ ತಮ್ಮನ್ನು ಕಂಡರೆ ಅದೆಷ್ಟು ದ್ವೇಷವೆಂದರೆ, ತಮ್ಮ ಹೆಸರು ಬಳಸಿ ಇಡೀ ಇತರೆ ಹಿಂದುಳಿದ ವರ್ಗಗಳನ್ನು (ಒಬಿಸಿ) ಕಾಂಗ್ರೆಸ್ ನಿಂದಿಸುತ್ತದೆ ಎಂದು ಮೋದಿ ಅವರು ದೂರಿದರು.

‘ಕಾಂಗ್ರೆಸ್ ಈಗ ಮೋದಿ ಅವರ ಜಾತಿಯನ್ನೂ ದ್ವೇಷಿಸುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷವು ಮೋದಿ ಹೆಸರು ಬಳಸಿ ಇಡೀ ಒಬಿಸಿ ಸಮುದಾಯವನ್ನು ನಿಂದಿಸುತ್ತಿದೆ... ನ್ಯಾಯಾಲಯ ಹೇಳಿದ ನಂತರವೂ ಆ ಪಕ್ಷವು ಕ್ಷಮೆ ಯಾಚಿಸಲು ಮುಂದಾಗುತ್ತಿಲ್ಲ’ ಎಂದು ಪ್ರಧಾನಿ ಮೋದಿ ಹೇಳಿದರು.

‘ಒಬಿಸಿ ಸಮುದಾಯದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಅದೆಷ್ಟು ದ್ವೇಷವಿದೆ ಎಂಬುದಕ್ಕೆ ಇದು ಉದಾಹರಣೆ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಕಾಂಗ್ರೆಸ್. ಬಾಬಾಸಾಹೇಬರ ರಾಜಕೀಯವನ್ನು ಕೊನೆಗೊಳಿಸಲು ಪಿತೂರಿ ನಡೆಸಿದ್ದು ಕಾಂಗ್ರೆಸ್’ ಎಂದು ಅವರು ಆರೋಪಿಸಿದರು.

‘ಒಬಿಸಿ ಆಯೋಗಕ್ಕೆ ಕಾಂಗ್ರೆಸ್ ಪಕ್ಷವು ಸಾಂವಿಧಾನಿಕ ಮಾನ್ಯತೆಯನ್ನು ದಶಕಗಳ ಕಾಲ ನೀಡಿರಲಿಲ್ಲ. ವೈದ್ಯಕೀಯ ಕಾಲೇಜುಗಳಲ್ಲಿ ಒಬಿಸಿ ವರ್ಗಗಳಿಗೆ ಮೀಸಲಾತಿ ಅನುಷ್ಠಾನಕ್ಕೆ ತರಲಿಲ್ಲ. ಆದರೆ ನಮ್ಮ ಸರ್ಕಾರವು ಈ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಜನರಿಗೆ ನೀಡಿತು, ಭರವಸೆ ಈಡೇರಿಸಿತು’ ಎಂದು ಮೋದಿ ಅವರು ಹೇಳಿದರು.

ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ ಹಾಗೂ ಓಲೈಕೆಗಾಗಿ ಏನು ಬೇಕಿದ್ದರೂ ಮಾಡಬಲ್ಲದು ಎಂದು ಮೋದಿ ಹೇಳಿದರು. ಛತ್ತೀಸಗಢದ ವಿಧಾನಸಭೆಗೆ ಎರಡನೆಯ ಹಂತದ ಮತದಾನವು ಶುಕ್ರವಾರ (ನವೆಂಬರ್ 17) ನಡೆಯಲಿದೆ.

ಕಾಂಗ್ರೆಸ್ ಪಕ್ಷವು ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಅಧಿಕಾರದಲ್ಲಿ ಇದ್ದರೂ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿಯನ್ನು ಹಲವು ವರ್ಷಗಳವರೆಗೆ ಜಾರಿಗೆ ತಂದಿರಲಿಲ್ಲ. 
– ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.