ADVERTISEMENT

ಕಾಂಗ್ರೆಸ್‌ ಇಲ್ಲದೆ ದೇಶಕ್ಕೆ ಉಳಿವಿಲ್ಲ: ಕನ್ಹಯ್ಯಾ ಕುಮಾರ್‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 16:42 IST
Last Updated 28 ಸೆಪ್ಟೆಂಬರ್ 2021, 16:42 IST
ಕನ್ಹಯ್ಯಾ ಕುಮಾರ್‌
ಕನ್ಹಯ್ಯಾ ಕುಮಾರ್‌    

ನವದೆಹಲಿ: ‘ಬಿಜೆಪಿಯ ಸಿದ್ಧಾಂತಗಳು ಭಾರತದ ಮೌಲ್ಯಗಳು, ಸಂಸ್ಕೃತಿ, ಇತಿಹಾಸ ಮತ್ತು ಭವಿಷ್ಯವನ್ನು ಹಾಳುಮಾಡುತ್ತಿವೆ. ಕಾಂಗ್ರೆಸ್‌ 200 ಕ್ಷೇತ್ರಗಳಲ್ಲಿ ಬಿಜೆಪಿ ಜತೆಗೆ ನೇರ ಹಣಾಹಣಿ ನಡೆಸುತ್ತದೆ. ಕಾಂಗ್ರೆಸ್‌ ಉಳಿಯದಿದ್ದರೆ, ದೇಶ ಉಳಿಯುವುದಿಲ್ಲ. ಹೀಗಾಗಿ ನಾನು ಕಾಂಗ್ರೆಸ್‌ ಸೇರುತ್ತಿದ್ದೇನೆ’ ಎಂದು ಕನ್ಹಯ್ಯಾ ಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್‌ ಸೇರಿದ ನಂತರ ಇಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ‘ಕಾಂಗ್ರೆಸ್‌ ದೊಡ್ಡ ಪಕ್ಷ. ದೊಡ್ಡ ಹಡಗನ್ನು ರಕ್ಷಿಸದೇ ಹೋದರೆ, ಸಣ್ಣ ದೋಣಿಗಳಿಗೆ ಉಳಿಗಾಲವಿಲ್ಲ. ಹೀಗಾಗಿ ಕಾಂಗ್ರೆಸ್‌ ಅನ್ನು ರಕ್ಷಿಸುವುದು ಅನಿವಾರ್ಯ’ ಎಂದು ಅವರು ಹೇಳಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಬಿಹಾರ ಕಾಂಗ್ರೆಸ್‌ ಉಸ್ತುವಾರಿ ಭಕ್ತ ಚರಣ ದಾಸ್, ಗುಜರಾತ್ ಕಾಂಗ್ರೆಸ್‌ ಕಾರ್ಯಕಾರಿ ಅಧ್ಯಕ್ಷ ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೆವಾನಿ ಕನ್ಹಯ್ಯಾ ಜತೆಗಿದ್ದರು.

ಕಾಂಗ್ರೆಸ್‌ ಸೇರಿದ್ದನ್ನು ಕನ್ಹಯ್ಯಾ ಸಮರ್ಥಿಸಿಕೊಂಡಿದ್ದಾರೆ. ‘ನಾನು ಜನರ ಆಕಾಂಕ್ಷೆಗಳು, ಮಹಾತ್ಮ ಗಾಂಧೀಜಿ ಅವರ ಏಕತ್ವ, ಭಗತ್ ಸಿಂಗ್ ಅವರ ಧೈರ್ಯ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಸಮಾನತೆಯ ಪ್ರತಿಪಾದನೆಯನ್ನು ನಂಬುತ್ತೇನೆ. ಕಾಂಗ್ರೆಸ್‌ ಇವೆಲ್ಲವನ್ನೂ ರಕ್ಷಿಸುತ್ತದೆ. ಕಾಂಗ್ರೆಸ್‌ ಕೇವಲ ಒಂದು ಪಕ್ಷವಲ್ಲ. ಅದೊಂದು ಧ್ಯೇಯ. ಅದು ದೇಶದ ಅತ್ಯಂತ ಹಳೆಯ ಪ್ರಜಾಸತ್ತಾತ್ಮಕ ಪಕ್ಷ. ನಾನೂ ಪ್ರಜಾಪ್ರಭುತ್ವಕ್ಕೆ ಒತ್ತು ನೀಡುತ್ತೇನೆ. ಕಾಂಗ್ರೆಸ್‌ನ ಹೊರತಾಗಿ ದೇಶವನ್ನು ರಕ್ಷಿಸುವುದು ಸಾಧ್ಯವಿಲ್ಲ ಎಂದು ನಾನೊಬ್ಬ ಮಾತ್ರವಲ್ಲ, ಹಲವರು ನಂಬಿದ್ದಾರೆ’ ಎಂದು ಕನ್ಹಯ್ಯಾ ಹೇಳಿದ್ದಾರೆ.

ADVERTISEMENT

ಕಾಂಗ್ರೆಸ್‌ ಸೇರುವುದಕ್ಕೂ ಕೆಲವೇ ಗಂಟೆ ಮೊದಲು ಅವರು ಸಿಪಿಐಗೆ ರಾಜೀನಾಮೆ ನೀಡಿದ್ದಾರೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರಿಗೆ ಕನ್ಹಯ್ಯಾ ರಾಜೀನಾಮೆ ಪತ್ರವನ್ನು ಮೇಲ್ ಮಾಡಿದ್ದಾರೆ. ‘ದೇಶದ ಇಂದಿನ ಸ್ಥಿತಿಯಲ್ಲಿ, ದೇಶಕ್ಕೆ ಪ್ರಬಲ ಮತ್ತು ಸಕ್ರಿಯವಾದ ಕಮ್ಯುನಿಸ್ಟ್ ಪಕ್ಷದ ಅವಶ್ಯಕತೆ ಇದೆ. ಪಕ್ಷವು ಈ ಅಗತ್ಯವನ್ನು ಪೂರೈಸುತ್ತದೆ ಎಂದು ನಾನು ನಂಬಿದ್ದೇನೆ. ಬೇಸರದ ಸಂಗತಿ ಎಂದರೆ, ನಾನು ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ಕೈಬಿಡಲು ನಿರ್ಧರಿಸಿದ್ದೇನೆ. ಬೇರೆ ಮಾರ್ಗದಲ್ಲಿ ರಾಜಕೀಯ ಮತ್ತು ಸೈದ್ಧಾಂತಿಕ ಜವಾಬ್ದಾರಿಗಳನ್ನು ಹೊರಲು ಸಿದ್ಧನಿದ್ದೇನೆ. ನನ್ನನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ತೆರವು ಮಾಡಿ ಎಂದು ಕೋರುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಅವರು ವಿವರಿಸಿದ್ದಾರೆ.

***

ದೇಶದ ಪ್ರಜಾಪ್ರಭುತ್ವ ಮತ್ತು ಭಾರತತ್ವವನ್ನು ಉಳಿಸಲು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮತ್ತು ಬ್ರಿಟಿಷರನ್ನು ಹೊರಗಟ್ಟಿದ ಪಕ್ಷದ ಜತೆಗಿರಬೇಕು

- ಜಿಗ್ನೇಶ್ ಮೆವಾನಿ, ದಲಿತ ನಾಯಕ

***

ಕನ್ಹಯ್ಯಾ ಅವರು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ವಿರುದ್ಧ ಹೋರಾಟದ ಪ್ರತಿಬಿಂಬವಾಗಿದ್ದಾರೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಹೊಸ ಹುರುಪು ಬಂದಿದೆ

- ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.