ADVERTISEMENT

ದೇಶಕ್ಕೆ ವಂಚನೆ, ಮೂರ್ಖತನದ ರಾಜಕೀಯ ಬೇಕಿಲ್ಲ: ಪ್ರಧಾನಿ ಮೋದಿ

ಐತಿಹಾಸಿಕ ಗೆಲುವು: ಪ್ರಧಾನಿ ಬಣ್ಣನೆ

ಪಿಟಿಐ
Published 8 ಫೆಬ್ರುವರಿ 2025, 15:53 IST
Last Updated 8 ಫೆಬ್ರುವರಿ 2025, 15:53 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ‘ದೇಶಕ್ಕೆ ವಂಚನೆ ಮತ್ತು ಮೂರ್ಖತನದ ರಾಜಕೀಯ ಬೇಕಿಲ್ಲ’ ಎಂದು ಹೇಳಿದರು.

ADVERTISEMENT

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ ವಿಜಯೋತ್ಸವದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಎಎಪಿ ಮತ್ತು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

‘ದೆಹಲಿಯ ಜನರು ಎಎಪಿಗೆ ನಿರ್ಗಮನದ ಬಾಗಿಲು ತೋರಿಸಿದ್ದಾರೆ. ಇನ್ನು ಮುಂದೆ ಡಬಲ್‌ ಎಂಜಿನ್‌ ಸರ್ಕಾರವು ದೆಹಲಿಯ ಅಭಿವೃದ್ಧಿಯ ವೇಗವನ್ನು ಇಮ್ಮಡಿಗೊಳಿಸಲಿದೆ. ದೆಹಲಿಯ ಜನರು ‘ಶಾರ್ಟ್-ಕಟ್‌ಗಳ ರಾಜಕೀಯವನ್ನು ಶಾರ್ಟ್-ಸರ್ಕ್ಯೂಟ್ ಮಾಡಿದ್ದಾರೆ’. ರಾಜಕೀಯದಲ್ಲಿ ಭ್ರಷ್ಟಾಚಾರ ಮತ್ತು ಸುಳ್ಳಿಗೆ ಜಾಗವಿಲ್ಲ ಎಂಬುದನ್ನು ಜನಾದೇಶ ಸ್ಪಷ್ಟಪಡಿಸಿದೆ’ ಎಂದಿದ್ದಾರೆ. 

‘ಮಹಿಳಾ ಶಕ್ತಿಯು ಯಾವಾಗಲೂ ನನ್ನನ್ನು ಆಶೀರ್ವದಿಸಿದೆ. ನಾನು ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ. ದೆಹಲಿಯಲ್ಲೂ ಆ ಕೆಲಸ ಮಾಡುತ್ತೇನೆ. ದೆಹಲಿ ಮತ್ತು ಸುತ್ತಮುತ್ತಲಿನ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಇದೆ. ಸ್ವಾತಂತ್ರ್ಯದ ನಂತರ ಪಕ್ಷವು ಮೊದಲ ಬಾರಿಗೆ ಈ ಸಾಧನೆ ಮಾಡಿದೆ’ ಎಂದರು.

‘ಕಾಂಗ್ರೆಸ್‌ ಕೈಹಿಡಿದವರ ಅಂತ್ಯ ಖಚಿತ’: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಪ್ರಧಾನಿ, ‘ಮಿತ್ರ ಪಕ್ಷಗಳನ್ನು ಒಂದೊಂದಾಗಿ ಮುಗಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ’ ಎಂದು ಕುಟುಕಿದರು.

ಕಾಂಗ್ರೆಸ್‌ಅನ್ನು ‘ನಗರ ನಕ್ಸಲರ ಪಕ್ಷ’ ಮತ್ತು ‘ಪರಾವಲಂಬಿ’ ಎಂದು ಲೇವಡಿ ಮಾಡಿದ ಅವರು, ‘ಕಾಂಗ್ರೆಸ್‌ನವರು ಅವರ ಮಿತ್ರ ಪಕ್ಷದವರ ಕಾರ್ಯಸೂಚಿ ಮತ್ತು ಮತ ಬ್ಯಾಂಕ್‌ಗಳಿಗೆ ಕನ್ನ ಹಾಕುತ್ತಾರೆ. ಯಾರೇ ಕಾಂಗ್ರೆಸ್‌ನ ಕೈ ಹಿಡಿದರೂ ಅವರ ಅಂತ್ಯ ಅನಿವಾರ್ಯ ಎಂಬುದು ಈ ಸ್ಪಷ್ಟವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.