ADVERTISEMENT

ಕಾಶಿ ವಿಶ್ವನಾಥ ದೇಗುಲ - ಗ್ಯಾನ್‌ವಪಿ ಮಸೀದಿ ಸ್ಥಳದ ಸರ್ವೆ: ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 16:15 IST
Last Updated 8 ಏಪ್ರಿಲ್ 2021, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಗಮನಾರ್ಹ ಬೆಳವಣಿಗೆಯಲ್ಲಿ ವಾರಣಸಿಯ ಸ್ಥಳೀಯ ನ್ಯಾಯಾಲಯವು ಕಾಶಿ ವಿಶ್ವನಾಥ ದೇವಸ್ಥಾನ –ಗ್ಯಾನ್‌ವಪಿ ಮಸೀದಿ ಭೂಮಿ ಇರುವ ಭೂಮಿಯ ಸರ್ವೆ ನಡೆಸಬೇಕು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೆ (ಎಎಸ್‌‌ಐ) ಆದೇಶಿಸಿದೆ.

ವಿಜಯ ಶಂಕರ್‌ ರಸ್ತೋಗಿ ಎಂಬುವವರು 1991ರಲ್ಲಿ ಸಲ್ಲಿಸಿದ್ದ ಅರ್ಜಿ ಆಧರಿಸಿ ಹಿರಿಯ ವಿಭಾಗೀಯ ಫಾಸ್ಟ್‌ಟ್ರ್ಯಾಕ್‌ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ. ಇಡೀ ಭೂಮಿಯೂ ಕಾಶಿ ವಿಶ್ವನಾಥ ದೇಗುಲಕ್ಕೆ ಸೇರಬೇಕು. ಅಲ್ಲಿರುವ ಗ್ಯಾನವಪಿ ಮಸೀದಿಯು ಭೂಮಿಯ ಒಂದು ಭಾಗವಷ್ಟೇ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.

ನ್ಯಾಯಾಧೀಶರಾದ ಅಶುತೋಷ್‌ ತಿವಾರಿ ಅವರು ಆದೇಶವನ್ನು ಕಳೆದ ವಾರ ಕಾಯ್ದಿರಿಸಿದ್ದರು. ಸಮೀಕ್ಷೆಗಾಗಿ ಐವರು ಸದಸ್ಯರ ತಂಡವನ್ನುಎಎಸ್ಐ ರಚಿಸಬೇಕು. ಇಡೀ ಪ್ರದೇಶದ ಸರ್ವೆ ನಡೆಸಬೇಕು. ಈ ಪ್ರಕ್ರಿಯೆಗೆ ತಗುಲುವ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಭೂವಿವಾದ ಇತ್ಯರ್ಥಪಡಿಸಲು ಸ್ಥಳದ ಸರ್ವೆಗೆ ನಡೆಸಲು ಪುರಾತತ್ವ ಇಲಾಖೆಗೆ ಆದೇಶಿಸಬೇಕು. ಹಿಂದೆ ಇದ್ದ ದೇವಸ್ಥಾನವನ್ನು ನೆಲಸಮಗೊಳಿಸಿದ ನಂತರ ಅಲ್ಲಿ ಮಸೀದಿ ಕಟ್ಟಲಾಗಿತ್ತು ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ತಮ್ಮ ವಾದಕ್ಕೆ ಸಮರ್ಥನೆಯಾಗಿ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣವನ್ನು ಉಲ್ಲೇಖಿಸಿದ್ದರು.

ಪ್ರತಿಯಾಗಿ ವಾದ ಮಂಡಿಸಿದ್ದ ಮುಸಲ್ಮಾನರ ಕಡೆಯವರು, ಆಗಸ್ಟ್‌ 15, 1947ರಲ್ಲಿ ಇದ್ದ ಸ್ಥಿತಿಯನ್ನೇ ಯಥಾವತ್‌ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದರು. ಪ್ರತಿವಾದಿಯಾಗಿರುವ ಕೇಂದ್ರ ಸುನ್ನಿ ವಕ್ಫ್‌ ಮಂಡಳಿ, ಈ ಆದೇಶವನ್ನು ಮೇಲಿನ ಉನ್ನತ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದೆ.

ಹಲವು ದಶಕಗಳಿಂದ ಈ ವಿವಾದ ಇತ್ತು. ಆದರೆ, ರಾಮಮಂದಿರ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ನ ಆದೇಶದ ನಂತರ ‘ಕಾಶಿ ವಿಶ್ವನಾಥ ದೇವಾಲಯದ ಸ್ಥಳವನ್ನು ಮರಳಿ ಪಡೆಯಿರಿ’ ಎಂಬ ಕೂಗು ಕೆಲ ಕೇಸರಿ ಸಂಘಟನೆಗಳಿಂದ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿತ್ತು.

ಈ ಹಿಂದೆ ಅಖಿಲ ಭಾರತೀಯ ಸಂತ ಸಮಿತಿಯು (ಎಬಿಎಸ್‌ಎಸ್) ಮುಸಲ್ಮಾನರಿಗೆ, ವಾರಣಸಿಯಲ್ಲಿ ಇರುವ ಕಾಶಿ ವಿಶ್ವನಾಥ ದೇವಸ್ಥಾನದ ಭೂಮಿಯನ್ನು ಒಪ್ಪಿಸಬೇಕು. ಇಲ್ಲವಾದಲ್ಲಿ, ತೀವ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿತ್ತು.

ಇಂತದೇ ಸಿವಿಲ್‌ ವ್ಯಾಜ್ಯವೊಂದು ಮಥುರಾದ ಜಿಲ್ಲಾ ನ್ಯಾಯಾಲಯದಲ್ಲಿಯೂ ಇದೆ. ಈ ಪ್ರಕರಣದಲ್ಲಿ ಶ್ರೀಕೃಷ್ಣ ಜನ್ಮಭೂಮಿಯ ಮಾಲೀಕತ್ವವನ್ನು ತಮಗೆ ಒಪ್ಪಿಸಬೇಕು. ಆ ಸ್ಥಳದಲ್ಲಿ ಇರುವ ಸಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಬೇಕು ಎಂದು ಅರ್ಜಿದಾರ ಸಂಘಟನೆಯು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.