ADVERTISEMENT

ಕೋವಿಶೀಲ್ಡ್‌ನಲ್ಲಿ ಕೋವ್ಯಾಕ್ಸಿನ್‌ಗಿಂತಲೂ ಹೆಚ್ಚು ಪ್ರತಿಕಾಯ ಉತ್ಪಾದನೆ: ಅಧ್ಯಯನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2021, 8:35 IST
Last Updated 7 ಜೂನ್ 2021, 8:35 IST
ಕೋವಿಡ್ ಲಸಿಕೆ - ಸಾಂದರ್ಭಿಕ ಚಿತ್ರ
ಕೋವಿಡ್ ಲಸಿಕೆ - ಸಾಂದರ್ಭಿಕ ಚಿತ್ರ   

ನವದೆಹಲಿ: ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೋವಿಶೀಲ್ಡ್ ಲಸಿಕೆಯು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ಗಿಂತಲೂ ಹೆಚ್ಚಿನ ಸಂಖ್ಯೆಯ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಈ ಅಧ್ಯಯನವನ್ನು ಜಿಡಿ ಆಸ್ಪತ್ರೆ ಮತ್ತು ಮಧುಮೇಹ ಸಂಸ್ಥೆಯ ಕೆ.ಎ. ಸಿಂಗ್ ಮತ್ತು ಇತರೆ ಆರು ತಜ್ಞರು ನಡೆಸಿದ್ದು, ಸದ್ಯ ಉನ್ನತ ಮಟ್ಟದ ಪರಿಶೀಲನೆಯ ಹಂತದಲ್ಲಿದೆ. ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಅಧ್ಯಯನ ವರದಿ ಇದಾಗಿದೆ.

ಅಧ್ಯಯನದ ಪ್ರಕಾರ ಎರಡೂ ಲಸಿಕೆಗಳು ವೈದ್ಯರು ಹಾಗೂ ದಾದಿಯರಲ್ಲಿ ಉತ್ತಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಆದರೆ ಪ್ರತಿಕಾಯ ಉತ್ಪಾದನಾ ಮಟ್ಟವು ಭಿನ್ನವಾಗಿದೆ ಎಂದು ಹೇಳಿದೆ.

ADVERTISEMENT

305 ಪುರುಷರು 210 ಮಹಿಳೆಯರು ಸೇರಿದಂತೆ 515 ಆರೋಗ್ಯ ಕಾರ್ಯಕರ್ತರಲ್ಲಿ ಅಧ್ಯಯನ ನಡೆಸಲಾಗಿತ್ತು. ಒಟ್ಟಾರೆಯಾಗಿ ಎರಡು ಲಸಿಕೆಗಳು ಶೇಕಡಾ 95ರಷ್ಟು ಮಂದಿಯಲ್ಲಿ ಪ್ರತಿಕಾಯ ಹೆಚ್ಚಿಸುತ್ತದೆ ಎಂಬುದನ್ನು ಕಂಡುಹಿಡಿದಿದೆ.

ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಲ್ಲಿ ಶೇಕಡಾ 98.1 ಮತ್ತು ಕೋವ್ಯಾಕ್ಸಿನ್ ಹಾಕಿಸಿದ 80 ಪ್ರತಿಶತ ಆರೋಗ್ಯ ಕಾರ್ಯಕರ್ತರಲ್ಲಿ ಸಿರೊ-ಪಾಸಿಟಿವಿಟಿ ದರ ಕಂಡುಬಂದಿದೆ. ಕೋವ್ಯಾಕ್ಸಿನ್ ಸ್ವೀಕರಿಸುವವರಿಗೆ ಹೋಲಿಸಿದರೆ ಪ್ರತಿಕಾಯಗಳ ಉತ್ಪಾದನೆಯನ್ನು ಸೂಚಿಸುವ ಸಿರೊ-ಪಾಸಿಟಿವಿಟಿ ದರ ಕೋವಿಶೀಲ್ಡ್‌ನಲ್ಲಿ ಗಣನೀಯವಾಗಿ ಹೆಚ್ಚಾಗಿದೆ.

ಈ ನಿಟ್ಟಿನಲ್ಲಿ ನಿಖರ ಫಲಿತಾಂಶಕ್ಕೆ ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂಬುದನ್ನು ವಿಜ್ಞಾನಿಗಳು ಮನಗಂಡಿದ್ದಾರೆ. ಕೋವಿಶೀಲ್ಡ್ ಮೊದಲ ಡೋಸ್ ಬಳಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೋವ್ಯಾಕ್ಸಿನ್ ಸ್ವೀಕರಿಸುವವರಲ್ಲಿ ಮೊದಲ ಡೋಸ್ ಬಳಿಕ ಪ್ರತಿಕಾಯ ಉತ್ಪಾದನೆಯು ಕಡಿಮೆಯಾಗಿತ್ತು. ಆದರೆ ಎರಡನೇ ಡೋಸ್ ಬಳಿಕ ಇದು ಸರಿದೂಗಿದೆ ಎಂದು ಉಲ್ಲೇಖಿಸಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ. ಅತ್ತ ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದ್‌ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ:

ಈ ಎರಡು ಲಸಿಕೆಗಳು ದೇಶದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದ್ದು, ಇದುವರೆಗೆ ಜನಸಂಖ್ಯೆಯ 3.5 ಪ್ರತಿಶತದಷ್ಟು ಜನರು ಎರಡೂ ಲಸಿಕೆಯನ್ನು ಪಡೆದಿದ್ದರೆ 14 ಪ್ರತಿಶತದಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ.

ಸಂಭವನೀಯ ಕೋವಿಡ್ ಮೂರನೇ ಅಲೆಯನ್ನು ತಡೆಗಟ್ಟಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಅತ್ತ ಬೇಡಿಕೆಗೆ ತಕ್ಕಂತೆ ಲಭ್ಯತೆಗಾಗಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಎರಡು ಸಂಸ್ಥೆಗಳು ತಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.