ADVERTISEMENT

ಕೋವಿಡ್‌: ದೇಶದಲ್ಲಿ 160ಕ್ಕೂ ಹೆಚ್ಚು ವೈದ್ಯರು ಸಾವು

ಪಿಟಿಐ
Published 2 ಫೆಬ್ರುವರಿ 2021, 8:47 IST
Last Updated 2 ಫೆಬ್ರುವರಿ 2021, 8:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ಈವರೆಗೆ ಕೋವಿಡ್‌ನಿಂದಾಗಿ 162 ವೈದ್ಯರು, 107 ದಾದಿಯರು ಮತ್ತು 44 ಆಶಾ ಕಾರ್ಯಕರ್ತೆಯರು ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರ್ಕಾರ, ರಾಜ್ಯಸಭೆಗೆ ಮಂಗಳವಾರ ತಿಳಿಸಿದೆ.

ಜನವರಿ 22 ವರೆಗೆ ರಾಜ್ಯಗಳು ನೀಡಿದ ಮಾಹಿತಿಗೆ ಆಧರಿಸಿ ಈ ಅಂಕಿಅಂಶವನ್ನು ಸಿದ್ಧಪಡಿಸಲಾಗಿದೆ.

ಕೋವಿಡ್‌ ಸಂಬಂಧಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರದ ಆರೋಗ್ಯ ಖಾತೆ ರಾಜ್ಯ ಸಚಿವ ಅಶ್ವಿನಿ ಚೌಬೆ ಅವರು,‘ ಈ ಅಂಕಿಅಂಶವನ್ನು ಭಾರತೀಯ ವೈದ್ಯಕೀಯ ಅಸೋಸಿಯೇಶನ್‌ ಸಿದ್ಧಪಡಿಸಿದೆ. ಇದನ್ನು ಆರೋಗ್ಯ ಸಚಿವಾಲಯವು ಪರಿಶೀಲಿಸಿದೆ. ಅಲ್ಲದೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಪ್ಯಾಕೇಜ್‌ ಅಡಿಯಲ್ಲಿ ಸಂತ್ರಸ್ತರ ಕುಟುಂಬದವರಿಗೆ ವಿಮೆ ವಿತರಣಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ’ ಎಂದರು.

ADVERTISEMENT

‘ಕೋವಿಡ್‌ ಪೀಡಿತ ಮತ್ತು ಸೋಂಕಿನಿಂದ ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಬಗ್ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕಾಳಜಿ ವಹಿಸುತ್ತಿದ್ದಾರೆ. ಈ ಸಂಬಂಧಿತ ಪ್ರಮಾಣೀಕರಣ ಕಾರ್ಯವನ್ನು ಕಾರ್ಯಕರ್ತರು ಕೆಲಸ ಮಾಡುತ್ತಿದ್ದ ಆರೋಗ್ಯ ಕೇಂದ್ರ, ಸಂಸ್ಥೆ ಮತ್ತು ಕಚೇರಿಗಳು ನೋಡಿಕೊಳ್ಳಲಿದೆ’ ಎಂದು ಅವರು ತಿಳಿಸಿದರು.

‘ರಾಜ್ಯ ಮತ್ತು ಕೇಂ‌ದ್ರಾಡಳಿತ ಪ್ರದೇಶದ ಪ್ರಾಧಿಕಾರಗಳಲ್ಲಿ, ಕೇಂದ್ರ ಸರ್ಕಾರದ ಆಸ್ಪತ್ರೆಗಳು, ಎಐಐಎಂಎಸ್‌, ಐಎನ್‌ಐ ಮತ್ತು ಕೇಂದ್ರ ಸಚಿವಾಲಯಗಳಲ್ಲಿ ಆರೋಗ್ಯ ವಿಮೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಲ್ಲಿಸಬಹುದು. ಈ ಬಳಿಕ ಅಧಿಕಾರಿಗಳು ಅದನ್ನು ಪರಿಶೀಲಿಸಿ, ವಿಮಾ ಕಂಪೆನಿಗಳಿಗೆ ವರ್ಗಾಯಿಸುತ್ತಾರೆ’ ಎಂದು ಚೌಬೆ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.