ADVERTISEMENT

ಆಮ್ಲಜನಕ ಕೊರತೆಯಿಂದ 11 ಸಾವು: ತಿರುಪತಿ ದುರಂತದ ತನಿಖೆಗೆ ಆಂಧ್ರ ಸಿಎಂ ಜಗನ್ ಆದೇಶ

ಏಜೆನ್ಸೀಸ್
Published 11 ಮೇ 2021, 10:32 IST
Last Updated 11 ಮೇ 2021, 10:32 IST
ವೈ,ಎಸ್‌.ಜಗನ್‌ಮೋಹನ್‌ ರೆಡ್ಡಿ
ವೈ,ಎಸ್‌.ಜಗನ್‌ಮೋಹನ್‌ ರೆಡ್ಡಿ   

ತಿರುಪತಿ: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಇಲ್ಲಿನ ರೂಯಾ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ 11 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿರುವುದಕ್ಕೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ದುರಂತದ ಕುರಿತು ಪ್ರತಿಕ್ರಿಯಿಸಿರುವ ಅವರು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದಿದ್ದಾರೆ. ವಿಸ್ತೃತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸುವಂತೆ ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸಚಿವ ಅಲ್ಲಾ ಕಲಿಕೃಷ್ಣ ಶ್ರೀನಿವಾಸ್ ಅವರು ಚಿತ್ತೂರು ಜಿಲ್ಲೆಯ ಅಧಿಕಾರಿಗಳ ಜತೆ ಮತ್ತು ರೂಯಾ ಆಸ್ಪತ್ರೆ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ದು, ಆಮ್ಲಜನಕ ಪೂರೈಕೆ ಸಮರ್ಪಕವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸೋಮವಾರ ಸಂಜೆ ದುರಂತ ಸಂಭವಿಸಿತ್ತು. ಆ ಸಂದರ್ಭದಲ್ಲಿ ಕೆಲವು ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು ಎನ್ನಲಾಗಿದೆ. ಆದರೆ ಕನಿಷ್ಠ 25 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಾಗಿರಲಿಲ್ಲ ಎಂದು ಸೋಂಕಿತರ ಕುಟುಂಬದವರು, ಸಂಬಂಧಿಗಳು ಆರೋಪಿಸಿದ್ದಾಗಿ ಕೆಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ರೂಯಾ ಸರ್ಕಾರಿ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ಐಸಿಯು ಹಾಸಿಗೆಗಳು, 400ಕ್ಕೂ ಹೆಚ್ಚು ಆಮ್ಲಜನಕ ಸಹಿತ ಹಾಸಿಗೆಗಳು ಇದ್ದು ಸುಮಾರು ಸಾವಿರ ಮಂದಿ ಕೋವಿಡ್ ಸೋಂಕಿತರು ದಾಖಲಾಗಿದ್ದರು. ಈ ಪೈಕಿ 300 ಮಂದಿ ಸೋಂಕಿತರು ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.